7 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಮನವಿ

| Published : May 17 2024, 12:35 AM IST / Updated: May 17 2024, 01:24 PM IST

ಸಾರಾಂಶ

ಬೆಳೆಗಳನ್ನು ರಕ್ಷಿಸಿಕೊಳ್ಳಲು ನೀರುಣಿಸಲ ಕನಿಷ್ಠ ೭ ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ನೂರಾರು ರೈತರು ಉಪ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

 ತೇರದಾಳ(ರ-ಬ) :  ತೇರದಾಳ ವ್ಯಾಪ್ತಿಯ ರೈತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ನೀರುಣಿಸಲ ಕನಿಷ್ಠ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಧುರೀಣ ಪ್ರವೀಣ ನಾಡಗೌಡ ಸೇರಿದಂತೆ ನೂರಾರು ರೈತರು ಉಪ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿ.ಟಿ. ಪಡಸಲಗಿ, ಸುರೇಶ ಅಕ್ಕಿವಾಟ, ನೇಮಣ್ಣಾ ಸಾವಂತನವರ, ಎಂ.ಎಂ. ಯಾದವಾಡ, ಜಿ.ಬಿ. ಶೇಡಬಾಳ, ಎಸ್.ಜಿ. ಹಳ್ಳಿ, ಜೆ.ಬಿ. ಹೊಸೂರ ಇತರರು ಮಾತನಾಡಿ, ನದಿಯಲ್ಲಿ ನೀರಿದ್ದರೂ ಸರ್ಕಾರ ನದಿ ಪಾತ್ರದ ರೈತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡದೇ ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಸುತ್ತಿರುವುದರಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ರೈತರಿಗೆ ಸಾಕಷ್ಟು ಬೆಳೆ ಹಾನಿ ಆಗಿದೆ. 

ನೆರೆಯ ಬೆಳಗಾವಿ ಜಿಲ್ಲೆಯ ರೈತರಿಗೆ ಅಲ್ಲಿನ ಜಿಲ್ಲಾಡಳಿತ ಈಗಲೂ ಸತತ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುತ್ತಿದ್ದು, ಜಿಲ್ಲಾಡಳಿತ ನಮ್ಮ ಭಾಗದ ರೈತರ ಬೆಳೆ ರಕ್ಷಣೆಗೆ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.