ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯದುವೀರ್ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಬಿಜೆಪಿ- ಜೆಡಿಎಸ್ ನ ಮಾಜಿ ಮೇಯರ್ ಗಳು ಮನವಿ ಮಾಡಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಸ್ವಾತಂತ್ರ್ಯ ನಂತರ ರಾಜರ ಆಳ್ವಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದಾಗ ಮೈಸೂರು ಅರಸರು ಮೊದಲಿಗರಾಗಿ ತಮ್ಮ ಸಂಸ್ಥಾನ ಬಿಟ್ಟುಕೊಟ್ಟರು. ದೇಶದಲ್ಲಿ ಇಂದಿಗೂ ಅನೇಕ ರಾಜರು ತಮ್ಮ ಆಸ್ತಿಯನ್ನು ಸಾರ್ವಜನಿಕರ ಬಳಕೆಗೆ ನೀಡಿಲ್ಲ. ಮೈಸೂರು ಮಹಾರಾಜರು ತಮ್ಮ ಇಡೀ ಆಸ್ತಿಯನ್ನು ಸಾರ್ವಜನಿಕರ ಬಳಕೆಗೆ ನೀಡಿದ್ದಾರೆ. ಹೀಗಾಗಿ ಮೈಸೂರು ಅರಸರ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಮೈಸೂರು ದೊಡ್ಡಮಟ್ಟದ ಸಾಧನೆ ಮಾಡಿದೆ ಎಂದರೆ ಅದಕ್ಕೆ ಮೈಸೂರು ಮಹಾರಾಜರೇ ಕಾರಣ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಸಮಸ್ಯೆಯಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆಯಿಂದ ಕಿತ್ತು ಮತ್ತೆ ಅದನ್ನೇ ಜನರಿಗೆ ಕೊಡುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಮುಂದೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಏನಿಲ್ಲ. ಮೈಸೂರಿನ ಜನರಿಗೆ ಕೇಂದ್ರ ಸರ್ಕಾರದ ಸಾಧನೆ, ಯೋಜನೆ ತಿಳಿಸುತ್ತೇವೆ. ಮತದಾರರು ಯದುವೀರ್ ಅವರಿಗೆ ಬೆಂಬಲ ನೀಡಬೇಕು ಎಂದು ಅವರು ಕೋರಿದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರು ದಲಿತರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಪೌರಕಾರ್ಮಿಕರ ಏಳಿಗೆಗಾಗಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಮೀಸಲಿಡಲಾಗಿದೆ. ಪೌರಕಾರ್ಮಿಕರ ಸೇವೆಯನ್ನು ಖಾಯಂ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಪೌರಕಾರ್ಮಿಕರನ್ನು ಕಡೆಗಣನೆಗೊಳಿಸಲಾಗಿತ್ತು ಎಂದರು.ಹೀಗಿದ್ದರೂ ಮಾಜಿ ಮೇಯರ್ ನಾರಾಯಣ್ ಅವರು ಪೌರಕಾರ್ಮಿಕರು ಕಾಂಗ್ರೆಸ್ ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಕಾಂಗ್ರೆಸ್ ಬೆಂಬಲಿಸಬಾರದು ಎಂದು ಹೇಳಿದರು.
ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ. ಲಕ್ಷ್ಮಣ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್, ಗ್ಯಾರಂಟಿ ಹೆಸರಿನಲ್ಲಿ ಮತ ಕೇಳುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಿದ್ದು ಬಿಟ್ಟರೆ ಬೇರೆ ಎಲ್ಲಾ ಯೋಜನೆ ಹಳ್ಳ ಹಿಡಿದಿದೆ. ನಗರ ಪಾಲಿಕೆ ಚುನಾವಣೆಯಲ್ಲೂ ಗೆಲ್ಲದ ವ್ಯಕ್ತಿಯನ್ನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ದೇಶದಲ್ಲಿ ಒಳ್ಳೆಯ ಆಡಳಿತ ನೀಡುವ ಜೊತೆಗೆ ದೇಶವನ್ನು ಉತ್ತಮವಾಗಿ ಮುನ್ನಡೆಸಲು ಮೋದಿ ಅವರ ಕೈ ಬಲಪಡಿಸಬೇಕು. ಆದ್ದರಿಂದ ಮೈಸೂರಿನ ಜನತೆ ಯದುವೀರ್ ಅವರನ್ನು ಬೆಂಬಲಿಸಬೇಕು ಎಂದು ಅವರು ಕೋರಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ರಾಜೇಶ್ವರಿ, ಭಾಗ್ಯವತಿ ಇದ್ದರು.