ತಾಲೂಕಿನ ಯಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಾಪುರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಭಗತ್ ಸಿಂಗ್ ಯುವಕರ ಸಂಘದ ಯುವಕರು ಹಾಗೂ ಗ್ರಾಮಸ್ಥರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಎರಡು ವಾರಗಳಿಂದ ನೀರಿನ ಬವಣೆ ತೀವ್ರವಾಗಿದೆ. ಗ್ರಾಮದಲ್ಲಿ 2 ಸಾರ್ವಜನಿಕ ಬಾವಿಗಳಿದ್ದು (ಕಟ್ಟಡ ಸಹಿತ) ಬಾವಿಗಳಲ್ಲಿನ ನೀರು ಕುಡಿಯಲು ಮತ್ತು ದಿನನಿತ್ಯದ ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲದೇ, ಕಸ, ಕಡ್ಡಿ ಬಿದ್ದಿವೆ. ಸುಮಾರು ವರ್ಷಗಳಿಂದ ಹೂಳು ತೆಗೆಯದ ಕಾರಣ ನೀರು ಕಲುಷಿತಗೊಂಡು, ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಕುಡಿಯಲು ಮತ್ತು ದಿನನಿತ್ಯದ ಬಳಕೆಗೆ ನೀರಿನ ತೀವ್ರ ಅಭಾವ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದ ಬಾವಿಗಳಲ್ಲಿರುವ ಕಲುಷಿತ ನೀರನ್ನು ಮೋಟಾರ್ ಮೂಲಕ ಹೊರಹಾಕಿ. ಹೂಳು ತೆಗೆಸಿ ಸ್ವಚ್ಛಗೊಳಿಸಬೇಕು. ಹಾಗೂ ಬಾವಿಗಳ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ತಪಾಸಣೆ ಮಾಡಿಸಬೇಕು. ಬಾವಿಗೆ ಕಸ ಬೀಳದಂತೆ ಸೂಕ್ತ ರೀತಿಯ ನೆಟ್ ಅಳವಡಿಸಬೇಕು. ಗ್ರಾಮದ ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸಿ ತಕ್ಷಣ ನೀರಿನ ಸೌಲಭ್ಯ ಕಲ್ಪಿಸುವಂತೆಯೂ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಪಿಡಿಒ ರವಿ ದಾಸರ್ ಮಾತನಾಡಿ, ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಾರದೊಳಗೆ ಬಾವಿಗಳನ್ನು ಸ್ವಚ್ಛಗೊಳಿಸಿ, ಬೋರ್‌ವೆಲ್ ಪುನಶ್ಚೇತನಗೊಳಿಸಿ ನೀರಿನ ಬವಣೆ ನೀಗಿಸಲಾಗುವುದು ಎಂದು ಭರವಸೆ ನೀಡಿದರು.

ಮನವಿ ಅರ್ಪಿಸುವ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಎಂ.ಕೆ.ಗಣೇಶ್. ಭಗತ್ ಸಿಂಗ್ ತಂಡ ಶಶಿಕುಮಾರ್, ಗಂಗಾಧರ, ಕೊಟ್ರೇಶ್, ಶಿವಾನಂದ, ಸಣ್ಣಹಾಲಪ್ಪ, ನಿರಂಜನ, ಬಸವರಾಜ್ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರಿದ್ದರು.