ಸಾರಾಂಶ
ಗದಗ: ೭ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ಯೋಜನೆ ರದ್ದತಿ, ಆರೋಗ್ಯ ಸಂಜೀವಿನಿ ಸೇರಿದಂತೆ ಹಲವು ಬೇಡಿಕೆಗಳ ಅನುಷ್ಠಾನಕ್ಕಾಗಿ ಒತ್ತಾಯಿಸಿ ಜ.೨೦ರೊಳಗಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲೆಯ ಎಲ್ಲ ಶಾಸಕರಿಗೆ ಮನವಿ ನೀಡುವ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಹೇಳಿದರು.
ನಗರದ ಸರಕಾರಿ ನೌಕರ ಭವನದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಸರಕಾರಿ ನೌಕರ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ ೭ನೇ ವೇತನ ಆಯೋಗವನ್ನ ರಚಿಸಿ ಇತರೆ ರಾಜ್ಯಗಳಲ್ಲಿನ ಸರಕಾರಿ ನೌಕರರ ವೇತನ ಮತ್ತು ಇತರೆ ಸವಲತ್ತುಗಳ ಬಗ್ಗೆ ಆಯೋಗ ಅಧ್ಯಯನ ನಡೆಸಿ, ವರದಿಯನ್ನು ಸಿದ್ಧಪಡಿಸಿದೆ.
೭ನೇ ವೇತನ ಆಯೋಗ ತಕ್ಷಣವೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಮುಂದೇ ಮಂಡಿಸಲಿ, ಈಗಿರುವ ಹೊಸ ಪಿಂಚಣಿ ರಾಜ್ಯ ಸರಕಾರ ಯೋಜನೆಯನ್ನ ಕೈ ಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸರಕಾರಿ ನೌಕರರ ಹಿತ ಕಾಪಾಡುವಲ್ಲಿ ಮುಂದಾಗಬೇಕಿದೆ ಎಂದರು.
ಸರಕಾರಿ ನೌಕರರ ಆರೋಗ್ಯ ದೃಷ್ಟಿಯಿಂದ ಅನುಷ್ಠಾನಗೊಂಡ ಆರೋಗ್ಯ ಸಂಜೀವಿನಿ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನವಾಗಲಿ. ಈ ಎಲ್ಲ ಬೇಡಿಕೆಗಳನ್ನು ಈಡೇರಿಕೆಗಾಗಿ ರಾಜ್ಯ ಸರಕಾರಿ ನೌಕರರು ಸಂಘಟಿತರಾಗಿ ಜ.೨೦ ರೊಳಗಾಗಿ ಗದಗ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲೆಯ ತಾಲೂಕುಗಳ ಶಾಸಕರಿಗೆ ಮನವಿಯನ್ನು ನೀಡುವ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಕೋಶಾಧ್ಯಕ್ಷ ಸತೀಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೊಣ್ಣೂರ, ಉಪಾಧ್ಯಕ್ಷ ಸಿದ್ದಪ್ಪ ಲಿಂಗದಾಳ, ಎಸ್.ಬಿ. ಬಿರಕಬ್ಬಿ, ದುರಗಣ್ಣವರ, ಭರಮಪ್ಪ, ತಿಪ್ಪಣ್ಣವರ, ಯಳಮಲಿ, ಮಲ್ಲಿಕಾರ್ಜುನ ಹನಸಿ, ಐ.ಎ. ಗಾಡಗೋಳಿ, ಶಿರಬಡಗಿ, ಸತೀಶ, ಮಂಜು ಬಂಡಿವಡ್ಡರ, ಮಲ್ಲಿಕಾರ್ಜುನ ಕಲಕಂಬಿ, ಕಿಲಬನವರ, ರಮೇಶ, ಎಸ್.ಆರ್.ಬಂಡಿ ಸೇರಿದಂತೆ ಹಲವರಿದ್ದರು.