ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬ್ರಹ್ಮಾನಂದ ಶ್ರೀಗೆ ಮನವಿ

| Published : Jul 18 2025, 12:51 AM IST

ಸಾರಾಂಶ

ಜಿಲ್ಲೆಯನ್ನು ಅವಲಂಬಿಸಬೇಕಾದ ದುಸ್ಥಿತಿಯಿಂದ ಜಿಲ್ಲೆಯ ನಾವು ಮತ್ತು ಮುಂದಿನ ಪೀಳಿಗೆಯನ್ನು ಹೊರತರಬೇಕಾಗಿದೆ.

ಕುಮಟಾ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಕಾರ್ಯ ಪ್ರವೃತ್ತರಾಗಿರುವ ಡಾ. ಜಿ.ಜಿ. ಹೆಗಡೆ ಗುರುವಾರ ಕೋನಳ್ಳಿಯಲ್ಲಿ ಚಾತುರ್ಮಾಸ ವ್ರತನಿರತ ಶ್ರೀರಾಮಕ್ಷೇತ್ರ ಪೀಠಾಧೀಶ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಮನವಿ ಸಮರ್ಪಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸ್ವಾಮೀಜಿ ಜತೆ ಚರ್ಚಿಸಿದ ಡಾ. ಜಿ.ಜಿ. ಹೆಗಡೆ, ಸ್ವಾತಂತ್ರ‍್ಯ ಬಂದು ಇಷ್ಟು ವರ್ಷವಾದರೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉನ್ನತ ಅಗತ್ಯತೆಗಳಿಗೆ ಬೇರೆ ಜಿಲ್ಲೆಯನ್ನು ಅವಲಂಬಿಸಬೇಕಾದ ದುಸ್ಥಿತಿಯಿಂದ ಜಿಲ್ಲೆಯ ನಾವು ಮತ್ತು ಮುಂದಿನ ಪೀಳಿಗೆಯನ್ನು ಹೊರತರಬೇಕಾಗಿದೆ. ಇದಕ್ಕಾಗಿ ಕನಿಷ್ಠ ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಗತ್ಯ. ಈಗಾಗಲೇ ಸಾಕಷ್ಟು ಜನರು ಇದರ ಬಗ್ಗೆ ಹೋರಾಟಗಳನ್ನು ಮಾಡುತ್ತ ಬಂದಿದ್ದರೂ ಆಸ್ಪತ್ರೆ ಕನಸು ಇಂದಿಗೂ ಕನಸಾಗೇ ಉಳಿದಿದೆ. ಹೀಗಾಗಿ ಜಿ.ಎನ್.ಹೆಗಡೆ ಟ್ರಸ್ಟ್ ಮೂಲಕ ಕಾರ್ಯ ಪ್ರಾರಂಭಿಸಿದ್ದು, ಈಗಾಗಲೇ ಜಿಲ್ಲೆಯ ಜನರನ್ನು ಒಂದೆಡೆ ಸೇರಿಸಿ ಅಭಿಪ್ರಾಯ ಸಂಗ್ರಹ ಮಾಡಿ ಎಲ್ಲರ ಸಹಕಾರ ಸಹಯೋಗ ಕೇಳಿದ್ದೇನೆ. ೩೦ ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದ್ದಲ್ಲಿ ನಿಗದಿತ ಸಮಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂಬ ದೃಢ ಸಂಕಲ್ಪ ನಮ್ಮದು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಆದಿಯಾಗಿ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಲವಾರು ಜನರನ್ನು ಈಗಾಗಲೇ ಸಂಪರ್ಕ ಮಾಡಿದ್ದು ಆಸ್ಪತ್ರೆ ನಿರ್ಮಾಣದ ಸತ್ಸಂಕಲ್ಪ ಈಡೇರಿಕೆಗೆ ಮಹಾಸ್ವಾಮೀಜಿಗಳ ಆಶೀರ್ವಾದ ಕೃಪೆಗಾಗಿ ಕೋರಿದರು. ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಕುರಿತು ಸ್ವಾಮೀಜಿಗಳಿಗೆ ವಿವರಿಸಿದರು.

ಈ ವೇಳೆ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ, ಕುಮಟಾ ತಾಲೂಕು ನಾಮಧಾರಿ ಸಂಘದ ಮಂಜುನಾಥ ಆರ್.ನಾಯ್ಕ, ಹೊನ್ನಾವರ ತಾಲೂಕು ನಾಮಧಾರಿ ಅಧ್ಯಕ್ಷ ಪಿ.ಟಿ.ನಾಯ್ಕ ಮತ್ತಿತರರು ಇದ್ದರು.