ಕೋಲಾರ ಜಿಲ್ಲೆ ನನ್ನ ರಾಜಕೀಯ ಕರ್ಮ ಭೂಮಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕಿತ್ತು. ಆದರೆ ಕಡೆ ಕ್ಷಣದಲ್ಲಿ ಪಕ್ಷ ಟಿಕೆಟ್ ಬೇರೆಯವರಿಗೆ ನೀಡಿದಾಗ ಮರು ಮಾತನಾಡದೆ ಒಪ್ಪಿ ಚುನಾವಣಾ ಕಣದಿಂದ ಹೊರ ಉಳಿದೆ.
ಕನ್ನಡಪ್ರಭ ವಾರ್ತೆ ಬೇತಮಂಗಲ
ಮಾವು ಉತ್ತಮ ಬೆಳೆ ಬಂದರೂ ಅಕಾಲಿಕ ಮಳೆ, ರೋಗಗಳಿಂದ ನಷ್ಟವಾಗುತ್ತಿದೆ. ಆದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾವಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಮ್ಯಾಂಗೋ ಮ್ಯಾರಥಾನ್ ಅನ್ನು ವಿಧಾನಸೌಧ ಮುಂದೆ ಆಯೋಜಿಸಲಾಗುವುದು ಎಂದು ರಾಜ್ಯ ಮಾವು ಮಂಡಳಿ ಅಧ್ಯಕ್ಷ ಮುದ್ದು ಗಂಗಾಧರ್ ಹೇಳಿದರು.ಜಕ್ಕರಸನಕುಪ್ಪ ಗ್ರಾಪಂ ವ್ಯಾಪ್ತಿ ಮರದಘಟ್ಟು ಗ್ರಾಮದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರ ಕ್ಷೇಮಾಭಿವೃದ್ಧಿ ಸಂಘ, ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮಂಡಳಿ, ಕೃಷಿ ಇಲಾಖೆ ಹಾಗೂ ಕ್ಯಾಶ್ಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿಯಿಂದ ತಾಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಸಮಾರಂಭ ಹಾಗೂ ಮಾವು ಬೆಳೆಗಾರ ಬೃಹತ್ ಸಮಾವೇಶ-ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾವು ಮಂಡಳಿ ಅಭಿವೃದ್ಧಿಗೆ ೧೦೦ ಕೋಟಿ ರುಪಾಯಿ ಅನುದಾನ ಬಜೆಟ್ ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ. ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಮಾವಿನ ಹಣ್ಣಿನ ಬಗ್ಗೆ ಜನರಲ್ಲಿ ಇನ್ನು ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನಸೌಧದ ಮುಂಭಾಗ ಮ್ಯಾಂಗೋ ಮ್ಯಾರಥಾನ್ ಅಯೋಜಿಸಲಾಗುವುದು, ಬೆಂಗಳೂರು ನಗರದಲ್ಲಿ ೧.೫ ಕೋಟಿ ಜನಸಂಖ್ಯೆ ಇದ್ದು ಶೇ.೧೫ ಜನರು ಮಾವಿನ ಹಣ್ಣನ್ನು ೧೬ ವಾರಗಳ ಕಾಲ ಸೇವಿಸಿದರೆ ಸಾಕು. ಇದೀಗ ಬೆಳೆಯಲಾಗುತ್ತಿರುವ ಬೆಳೆಯನ್ನು ೩ ಪಟ್ಟು ಹೆಚ್ಚಿಸಬೇಕಾಗುತ್ತದೆ. ಮತ್ತು ಬೆಂಗಳೂರಿನ ನಂದಿನಿ ಮಳಿಗೆಯಲ್ಲಿ ಮಾವು ಮಾರಾಟ ಮಾಡಲು ಸಹ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಮಾತನಾಡಿ, ಹಲವು ಸಂಕಷ್ಟದಲ್ಲೂ ಮಾವು ಬೆಳೆ ಬೆಳೆದರೂ ಸೂಕ್ತ ಬೆಲೆ ದೊರಕುತ್ತಿಲ್ಲ. ನಮ್ಮ ಸಂಘದ ಹೋರಾಟದ ಫಲವಾಗಿ ಮಾವು ಬೆಳೆಗಾರರ ಹಲವು ಬೇಡಿಕೆ ಸರ್ಕಾರ ಈಡೇರಿಸಿದೆ. ಆದರೂ ಸಹ ಇನ್ನಷ್ಟು ಬೇಡಿಕೆ ಇದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸಬೇಕು ಎಂದು ಹೇಳಿದರು.
ನಂದಿನಿ ಹಾಲು ಒಕ್ಕೂಟವು ಮಾವಿನ ಹಣ್ಣಿನಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ನಂದಿನಿ ಮಳಿಗೆಯಲ್ಲಿ ಮಾರಾಟ ಮಾಡುವ ಮೂಲಕ ರೈತರ ಕೈ ಹಿಡಿಯಬೇಕು ಎಂದು ಹೇಳಿದರು.ತಾಲೂಕು ಮಾವು ಬೆಳೆಗಾರರ ಸಂಘದ ನೂತನ ಅಧ್ಯಕ್ಷ ಅಭಿಲಾಷ್ ರೆಡ್ಡಿ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ಸರಿ ಸುಮಾರು ೩೦೦೦ ಸಾವಿರ ಕುಟುಂಬಗಳು ಮಾವು ಬೆಳೆಯನ್ನೇ ಆಧಾರ ಮಾಡಿಕೊಂಡಿವೆ. ಕೋಲಾರ ಜಿಲ್ಲೆಯಲ್ಲಿ ೪೦ ಸಾವಿರ ಎಕರೆ ಜಮೀನಿನಲ್ಲಿ ಮಾವು ಬೆಳೆ ಬೆಳೆಯುತ್ತಿದ್ದಾರೆ. ಅವರಿಗೆ ಭದ್ರತೆ ಕಲ್ಪಿಸಬೇಕಿದೆ ಹಾಗೂ ತೋಟಗಾರಿಕೆ ಕಚೇರಿಯನ್ನು ಕೆಜಿಎಫ್ ನಗರದಲ್ಲೂ ತೆರೆಯಬೇಕಿದೆ. ಹಾಗೂ ಮಾವು ಮಂಡಳಿಯ ಶಾಖಾ ಕಚೇರಿ ಕ್ಯಾಸಂಬಳ್ಳಿಯಲ್ಲಿ ತೆರೆಯಬೇಕು ಎಂದು ಹೇಳಿದರು.
ಹಾಲು ಒಕ್ಕೂಟದ ಅಧ್ಯಕ್ಷ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಮಾವು ಬೆಳೆಗಾರರ ನೆರವಿಗೆ ಕೋಮಲ್ ಮುಂದೆ ಬರಲಿದೆ. ನಂದಿನಿ ಮಳಿಗೆಯಲ್ಲಿ ಮಾವು ಕೌಂಟರ್ ತೆರೆಯಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಜಾವಿದ್, ಆರ್.ಕೆ. ಫೌಂಡೇಶನ್ ಅಧ್ಯಕ್ಷ ಮೋಹನ್ ಕೃಷ್ಣ, ಮುಖಂಡರಾದ ವೆಂಕಟಕೃಷ್ಣರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ, ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಭಿಲಾಶ್ ರೆಡ್ಡಿ, ಸರ್ಕಾರಿ ನೌಕರ ಸಂಘದ ನಿವೃತ್ತ ಅಧ್ಯಕ್ಷರಾದ ರವಿ ರೆಡ್ಡಿ, ಅರುಣ್ ರೆಡ್ಡಿ, ವಿಜ್ಞಾನಿಗಳದ ಡಾ.ಮಂಜುನಾಥ್ ರೆಡ್ಡಿ, ಡಾ.ಅನಿಲ್ ಕುಮಾರ್, ಅಶ್ವಥ್ ನಾರಾಯಣ್ ರೆಡ್ಡಿ ಇದ್ದರು.
---------ಕೋಲಾರ ನನ್ನ ರಾಜಕೀಯ ಕರ್ಮಭೂಮಿ
ಕೋಲಾರ ಜಿಲ್ಲೆ ನನ್ನ ರಾಜಕೀಯ ಕರ್ಮ ಭೂಮಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕಿತ್ತು. ಆದರೆ ಕಡೆ ಕ್ಷಣದಲ್ಲಿ ಪಕ್ಷ ಟಿಕೆಟ್ ಬೇರೆಯವರಿಗೆ ನೀಡಿದಾಗ ಮರು ಮಾತನಾಡದೆ ಒಪ್ಪಿ ಚುನಾವಣಾ ಕಣದಿಂದ ಹೊರ ಉಳಿದೆ. ನಂತರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಭೇಟಿ ಮಾಡಿದ್ದೆ. ಆದರೆ ಪಕ್ಷ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿತು. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ನಾನು ಪಕ್ಷಕ್ಕಾಗಿ ಮಾಡಿದ ತ್ಯಾಗ ಗುರುತಿಸಿ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ರಾಜ್ಯ ಮಾವು ಮಂಡಳಿ ಅಧ್ಯಕ್ಷ ಮುದ್ದು ಗಂಗಾಧರ್ ಹೇಳಿದರು.ಕೋಲಾರ ಜಿಲ್ಲೆಯಲ್ಲಿ ಕೋಲಾರ, ಬಂಗಾರಪೇಟೆ, ಮಾಲೂರು, ಕೆಜಿಎಫ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಮುಳಬಾಗಿಲು ಕ್ಷೇತ್ರದಲ್ಲಿ ಮರಳಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.