ಸಾರಾಂಶ
ಪಟ್ಟಣದ ಮುಖ್ಯರಸ್ತೆ (ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ) ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ (ಲಕ್ಷ್ಮೀ ನಾರಾಯಣ ಬಣ) ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕಾಕೋಳ ಗ್ರಾಮದ ಹೆದ್ದಾರಿಯಲ್ಲಿ ತಡೆದು ಮನವಿ ಸಲ್ಲಿಸಿದರು.
ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ (ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ) ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ (ಲಕ್ಷ್ಮೀ ನಾರಾಯಣ ಬಣ) ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕಾಕೋಳ ಗ್ರಾಮದ ಹೆದ್ದಾರಿಯಲ್ಲಿ ತಡೆದು ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಈಶ್ವರ ಮಠದ ಮಾತನಾಡಿ, ಅಂತಾರಾಷ್ಟೀಯ ಖ್ಯಾತಿಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದಲ್ಲಿ ಗುಣಮಟ್ಟದ ರಸ್ತೆಯಿಲ್ಲ, ಕಳೆದ 25 ವರ್ಷದಿಂದ ಮುಖ್ಯರಸ್ತೆ ಅಭಿವೃದ್ಧಿ ಕಂಡಿಲ್ಲ, ಕೆಲ ವರ್ಷಗಳ ಹಿಂದೆ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿ ಮಾಡಿದರೂ ಸಹ ರಸ್ತೆ ಮಾತ್ರ ತಗ್ಗುಗುಂಡಿಗಳಿಂದ ತುಂಬಿ ಹೋಗಿ ರಸ್ತೆ ಸಂಚಾರ ಅಯೋಮಯವಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿಪಡಿಸಿ ಜನರ ಬವಣೆ ತಪ್ಪಿಸುವಂತೆ ಮನವಿ ಮಾಡಿದರು.ಶಿವುಕುಮಾರ ಕಲ್ಲಾಪುರ ಮಾತನಾಡಿ, ಮುಖ್ಯರಸ್ತೆಯಲ್ಲಿ ಕೆಲವೇ ಜನರ ಸ್ವಹಿತಾಸಕ್ತಿಗೆ ಬ್ಯಾಡಗಿ ತಾಲೂಕಿನ ಜನತೆ ಪ್ರತಿದಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಳೆದ 15 ವರ್ಷದಿಂದ ನಿರಂತರ ಹೋರಾಟ ಮಾಡುತ್ತ ಬಂದಿದ್ದರೂ ರಸ್ತೆ ಅಭಿವೃದ್ಧಿಯಾಗಿಲ್ಲ, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಗ್ಗು ಗುಂಡಿಗಳನ್ನು ಮುಚ್ಚದೇ ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಆದ್ದರಿಂದ ರಸ್ತೆ ಅಭಿವೃದ್ಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ತಾಲೂಕಾಧ್ಯಕ್ಷ ಈಶ್ವರ ಮಠದ, ಈರಣ್ಣ ಮಾಳೇನಹಳ್ಳಿ, ಸುರೇಶ ಛತ್ರದ, ಈರಣ್ಣ ಕರಡಿ, ಮಂಜುನಾಥ ಕಾಟೇನಹಳ್ಳಿ, ಲೋಹಿತ್ ಕಾಟೇನಹಳ್ಳಿ, ಸಿದ್ದು ಹಿರೇಮಠ ಸೇರಿದಂತೆ ಇನ್ನಿತರರಿದ್ದರು.ಪರಿಶೀಲಿಸಿ ಕ್ರಮ ಕೈಗೊಳ್ಳುವೆ:ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಪರಿಶೀಲನೆ ಬಳಿಕ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಅಲ್ಲಿಂದ ತೆರಳಿದರು.