ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಪಂ ಅಭಿವೃದ್ದಿ ಅಧಿಕಾರಿ ಸಿದ್ದರಾಜು ಅವರನ್ನು ಜಿಲ್ಲಾಧಿಕಾರಿ ಏಕಾಏಕಿ ಅಮಾನತು ಪಡಿಸಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಡಳಿತ ಭವನದ ಮುಂದೆ ಸಮಾವೇಶಗೊಂಡ ಜಿಲ್ಲೆಯ ಎಲ್ಲಾ ಪಿಡಿಓಗಳು ಸಿದ್ದರಾಜು ಅಮಾನುತ್ತು ಮಾಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಖಂಡಿಸಿದರು. ಅಲ್ಲದೇ ಸಂಘದ ಜಿಲ್ಲಾ ಅಧ್ಯಕ್ಷ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ತೆರಳಿ ಅವರ ಅಧೀನ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಗ್ರಾಪಂ ಅನಿರೀಕ್ಷಿತ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪಂಚಾಯಿತಿ ಅಭಿವೃದ್ದಿಗೆ ಗೈರು ಹಾಜರಾಗಿದ್ದರು ಎಂಬ ಕಾರಣ ನೀಡಿ, ಯಾವುದೇ ನೋಟಿಸ್ ನೀಡದೇ ಅಮಾನತ್ತು ಮಾಡಿರುವುದು ಸರಿಯಲ್ಲ. ಇದರಿಂದ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓಗಳ ಅತ್ಮಸ್ಥೈರ್ಯ ಕುಂದಿತ್ತದೆ. ಅಲ್ಲದೇ ಜಿಲ್ಲಾಧಿಕಾರಿಗಳು ಪಂಚಾಯಿತಿಗೆ ಭೇಟಿ ನೀಡುವ ವಿಷಯ ಪಿಡಿಓಗೆ ತಿಳಿದಿಲ್ಲ. ಇದಕ್ಕು ಮಿಗಲಾಗಿ ಪಂಚಾಯಿತಿ ಪಿಡಿಓ ಸಿದ್ದರಾಜು ಜಿಪಂ ಸಿಇಓ ಹಾಗೂ ಉಪ ಕಾರ್ಯದರ್ಶಿಗಳ ಅನುಮತಿ ಪಡೆದುಕೊಂಡು ಅಂದು ಅವರ ಪುಟ್ಟ ಮಗುವನ್ನು ಆರೋಗ್ಯ ತಪಾಸಣೆಗೆ ಹೋಗಿರುತ್ತಾರೆ. ಹೀಗಿದ್ದರೂ ಸಹ ಪಿಡಿಓ ವಿರುದ್ದ ಜಿಲ್ಲಾಧಿಕಾರಿ ಕ್ರಮ ಕೊಂಡಿರುವುದು ಸರಿಯಾದ ಕ್ರಮವಲ್ಲ. ಈ ಕೂಡಲೇ ಅಮಾನುತ್ತು ಅದೇಶವನ್ನು ವಾಪಸ್ ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ಸಂಘದಿಂದ ನ್ಯಾಯ ದೊರೆಯುವ ತನಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಶಾಂತರಾಜು, ಖಜಾಂಚಿ ಮಹದೇವಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಸೇರಿದಂತೆ ಜಿಲ್ಲೆಯ ವ್ಯಾಪ್ತಿಯ ಪಿಡಿಒಗಳು ಭಾಗವಹಿಸಿದ್ದರು.