ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಹಿಂದೂ ಧರ್ಮ ಅವಹೇಳನ ಮಾಡಿದ ಆರೋಪವುಳ್ಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಗೆ ಸತ್ಯಶೋಧನಾ ಸಮಿತಿ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಲೆ ಮಕ್ಕಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿರುವ ಸಾಧ್ಯತೆಯ ಕುರಿತೂ ಸತ್ಯಶೋಧನೆ ನಡೆಯಬೇಕು ಎಂದಿದ್ದಾರೆ.ಮಂಗಳವಾರ ಕಾಂಗ್ರೆಸ್ ಮುಖಂಡರ ನಿಯೋಗದೊಂದಿಗೆ ಶಾಲೆಗೆ ಭೇಟಿ ನೀಡಿದ ಅವರು ಶಾಲಾ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಘಟನೆಯಿಂದ ದ.ಕ. ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ತೊಡಕಾಗುವ ವಾತಾವರಣ ಸೃಷ್ಟಿಯಾಗಬಾರದು. ಈ ನಿಟ್ಟಿನಲ್ಲಿ ನಿಜವಾಗಿಯೂ ಏನು ನಡೆದಿದೆ ಎಂಬ ಬಗ್ಗೆ ಸಂಪೂರ್ಣ ತನಿಖೆಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ತಿಳಿಸಿದರು.ಮಕ್ಕಳ ದುರ್ಬಳಕೆ ಆರೋಪ: ಘಟನೆಗೆ ಸಂಬಂಧಿಸಿ ಮಕ್ಕಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿರುವ ಎಲ್ಲ ಅಂಶಗಳ ತನಿಖೆಯಾಗಬೇಕು. ಯಾವ ಸನ್ನಿವೇಶ ಬಂದರೂ ಸಮಾಜ, ಸಾರ್ವಜನಿಕರು ಬೇಕಾದರೆ ಮಾತನಾಡಲಿ, ನಿಷ್ಕಲ್ಮಶವಾಗಿರುವ ಮಕ್ಕಳ ಮನಸ್ಸನ್ನು ಪ್ರಚೋದನೆ ಮಾಡುವುದು, ಮಕ್ಕಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಆಗಬಾರದು. ಮಕ್ಕಳ ದುರುಪಯೋಗ ನಡೆದಿದ್ದರೆ ಆ ಬಗ್ಗೆಯೂ ತನಿಖೆಯಾಗಿ ಕ್ರಮ ಆಗಬೇಕು ಎಂದು ರಮಾನಾಥ ರೈ ಹೇಳಿದರು.ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಸರಿಪಡಿಸಬೇಕಿತ್ತು. ಪ್ರಕರಣ ಉಲ್ಭಣಾವಸ್ಥೆಗೆ ಹೋಗುವುದನ್ನು ತಡೆಯುವಲ್ಲಿ ಶಿಕ್ಷಣ ಇಲಾಖೆಯವರು ಸ್ವಲ್ಪ ಮಟ್ಟಿಗೆ ಹಿಂದುಳಿದಿದ್ದಾರೆ. ಯಾಕೆ ಸರಿಪಡಿಸಲು ಆಗಿಲ್ಲ ಎನ್ನುವುದು ಕೂಡ ವಿಮರ್ಶೆ ಆಗಬೇಕಿದೆ. ಜಿಲ್ಲೆಯ ಸಾಮರಸ್ಯ ಕಾಪಾಡುವ ಹಿನ್ನೆಲೆಯಲ್ಲಿ ಭಾವೈಕ್ಯದಿಂದ ಘಟನೆಯನ್ನು ಬಗೆಹರಿಸಬೇಕಾಗಿದೆ ಎಂದು ರೈ ಹೇಳಿದರು.ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪ್ರಕರಣದ ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ಆ ದೃಷ್ಟಿಯಲ್ಲಿ ಸಂಬಂಧಪಟ್ಟಇಲಾಖೆ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಗ್ರ ತನಿಖೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.ಘೋಷಣೆ ಕೂಗಲು ಪ್ರಚೋದನೆ: ಶಿಕ್ಷಕಿ ಯಾವುದೇ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇವೆ. ಈ ಬಗ್ಗೆ ತನಿಖೆ ನಡೆಯಲಿದೆ. ಆದರೆ ಸೋಮವಾರ ಪ್ರತಿಭಟನೆ ವೇಳೆ ಸ್ಥಳೀಯ ಶಾಸಕರು ಮಕ್ಕಳಿಗೆ ಘೋಷಣೆ ಕೂಗಲು ಪ್ರಚೋದಿಸಿದ್ದಾರೆ. ಇಂತಹ ಕೃತ್ಯಗಳು ಆಗಬಾರದು ಎಂದು ಕೆಪಿಸಿಸಿ ವಕ್ತಾರೆ ಫರ್ಜಾನಾ ಆಕ್ಷೇಪಿಸಿದರು.ನಿಯೋಗದಲ್ಲಿ ಮುಖಂಡರಾದ ಜೆ.ಆರ್. ಲೋಬೊ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಭಾಸ್ಕರ ಮೊಯ್ಲಿ, ವಿಶ್ವಾಸ್ ದಾಸ್ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))