ಕಾಡಾನೆ ಉಪಟಳ ತಡೆಗೆ ಅರಣ್ಯಾಧಿಕಾರಿಗಳಿಗೆ ಮನವಿ

| Published : Dec 08 2023, 01:45 AM IST

ಸಾರಾಂಶ

ರಾತ್ರಿಯಾಗುತ್ತಿದ್ದಂತೆ ಭತ್ತ, ಬಾಳೆ, ಶುಂಠಿ, ಕಬ್ಬು, ಅಡಕೆ ಹೊಲಗದ್ದೆಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಒಂದಿಷ್ಟನ್ನು ತಿಂದು, ಉಳಿದ ಫಸಲನ್ನು ನಷ್ಟಗೊಳಿಸುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲಾಗದೆ, ಆನೆಗಳನ್ನು ಓಡಿಸಲಾಗದೆ ಅಸಹಾಯಕರಾಗಿರುವ ರೈತರು ಅನಿವಾರ್ಯವಾಗಿ ಅರಣ್ಯ ಇಲಾಖೆಯ ಮೊರೆಹೋಗುತ್ತಿದ್ದಾರೆ. ಇಲಾಖಾ ಸಿಬ್ಬಂದಿ ಸ್ಥಳಪರಿಶೀಲನೆ ನಡೆಸುವುದರೊಂದಿಗೆ ಆನೆಗಳನ್ನು ಬೇರೆಡೆ ಬೆನ್ನಟ್ಟುವ ಭರವಸೆಯನ್ನು ನೀಡುತ್ತಿದ್ದಾರೆ.

ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಬೀಡುಬಿಟ್ಟಿರುವ ಕಾಡಾನೆ

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಬೀಡುಬಿಟ್ಟಿರುವ ಕಾಡಾನೆಗಳ ಉಪಟಳಕ್ಕೆ ಈಭಾಗದ ರೈತರು ಹೈರಾಣಾಗಿದ್ದಾರೆ.

ಆಲುವಳ್ಳಿ, ಮಾದಾಪುರ, ಕಲ್ಯಾಣಪುರ, ಕಮದೂರು ಗ್ರಾಮಗಳ ರೈತರ ಹೊಲಗದ್ದೆಗಳಿಗೆ ಆನೆಗಳು ನಿರಂತರ ದಾಳಿಮಾಡುತ್ತಿದ್ದು, ಈಗಾಗಲೇ ಮಲ್ಲಿಕಾರ್ಜುನ, ರಾಜೇಶ, ಕುಮಾರಗೌಡ, ಲಿಂಗಪ್ಪ, ಕೀರ್ತಿರಾಜ ರೈತರ ಲಕ್ಷಾಂತರ ರುಪಾಯಿಯ ಬೆಳೆಗಳನ್ನು ನಷ್ಟಗೊಳಿಸಿದ್ದು, ಅಳಿದುಳಿದ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ರೈತರು ಅಸಹಾಯಕರಾಗಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಭತ್ತ, ಬಾಳೆ, ಶುಂಠಿ, ಕಬ್ಬು, ಅಡಕೆ ಹೊಲಗದ್ದೆಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಒಂದಿಷ್ಟನ್ನು ತಿಂದು, ಉಳಿದ ಫಸಲನ್ನು ನಷ್ಟಗೊಳಿಸುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲಾಗದೆ, ಆನೆಗಳನ್ನು ಓಡಿಸಲಾಗದೆ ಅಸಹಾಯಕರಾಗಿರುವ ರೈತರು ಅನಿವಾರ್ಯವಾಗಿ ಅರಣ್ಯ ಇಲಾಖೆಯ ಮೊರೆಹೋಗುತ್ತಿದ್ದಾರೆ. ಇಲಾಖಾ ಸಿಬ್ಬಂದಿ ಸ್ಥಳಪರಿಶೀಲನೆ ನಡೆಸುವುದರೊಂದಿಗೆ ಆನೆಗಳನ್ನು ಬೇರೆಡೆ ಬೆನ್ನಟ್ಟುವ ಭರವಸೆಯನ್ನು ನೀಡುತ್ತಿದ್ದಾರೆ. ಚೋರಡಿ, ಅರಸಾಳು, ಮೂಗುಡ್ತಿ ಅರಣ್ಯ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆಯೊಂದಿಗೆ ಆನೆಗಳ ಇರುವಿಕೆಯನ್ನು ಪತ್ತೆ ಹಚ್ಚಲು ಕೊಂಬಿಂಗ್ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ರಾತ್ರಿ ಈಟಿಕೆರೆ ರೈತ ಕೀರ್ತಿರಾಜ್‍ರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ, ಅಡಕೆ ಮರಗಳನ್ನು ನಾಶಪಡಿಸಿರುವುದು ಬೆನ್ನಟ್ಟುವ ಕಾರ್ಯಾಚರಣೆಗೆ ಸವಾಲೆಸೆದಿವೆ.

ಹಗಲು ಹೊತ್ತಿನಲ್ಲಿ ಹೇಗೋ ಸಾವರಿಸಿಕೊಂಡು ದೈನಂದಿನ ವಹಿವಾಟು ನಡೆಸುತ್ತಿರುವ ರೈತರು ಸಂಜೆಯಾಗುತ್ತಿದ್ದಂತೆ ಆನೆಗಳ ದಾಳಿಯ ನಿರೀಕ್ಷೆಯಿಂದ ಆತಂಕಗೊಂಡು ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದು, ಆಯಕಟ್ಟಿನ ಸ್ಥಳಗಳಲ್ಲಿ ಬೆಂಕಿ ಹಾಕಿಕೊಂಡು ಬೆಳೆಗಳ ಕಾವಲು ಮಾಡಿಕೊಳ್ಳುವುದೇ ಸಂಕಷ್ಟಕ್ಕೆ ಎಡೆಮಾಡಿದೆ. ಅತೀಸೂಕ್ಷ್ಮಮತಿಯಾಗಿರುವ ಆನೆಯಿಂದ ಬೆಳೆ ಹಾಗೂ ಜೀವ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಅಪಾಯಕರವಾಗಿದ್ದು, ಆಡಳಿತವರ್ಗ ಮತ್ತು ಇಲಾಖೆ ಅಧಿಕಾರಿಗಳು ಜನರ ನೆರವಿಗೆ ಧಾವಿಸಬೇಕಿದೆ.

- - -

ಕೋಟ್‌..

ಕಳೆದೊಂದು ವಾರದಿಂದ ಹಗಲು ರಾತ್ರಿಯನ್ನದೇ ಬೆಳೆಗಳ ಕಾವಲು ಕಾಯುತ್ತಿದ್ದೇವೆ. ಆದರೂ ಸಹಿತ ಹಲವು ರೈತರ ಬೆಳೆಗಳನ್ನು ಆನೆಗಳು ಧ್ವಂಸಮಾಡಿವೆ. ಬದುಕಿನ ಮೂಲಾಧಾರವಾಗಿರುವ ಬೆಳೆಗಳನ್ನು ಕಳೆದುಕೊಂಡು ಜೀವನ ಕಷ್ಟಕರವಾಗಿದೆ. ಇಲಾಖೆಯವರು ಜನರಿಗೆ ಪ್ರಾಣಹಾನಿಯಾಗುವ ಮೊದಲೆ ಎಚ್ಚೆತ್ತುಕೊಂಡು ಆನೆಗಳನ್ನು ಬೇರೆಡೆ ಸಾಗಿಸಲಿ, ಇಲ್ಲದಿದ್ದರೆ ಇನ್ನೊಂದೆರಡು ದಿನಗಳಲ್ಲಿ ಈ ಭಾಗದ ಸಾರ್ವಜನಿಕರೊಂದಿಗೆ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.

- ಕೀರ್ತಿರಾಜ್, ಬೆಳೆ ಹಾನಿಗೊಳಗಾದ ರೈತ

- - - -

ಕೋಟ್‌..

ಚೋರಡಿ, ಮೂಗುಡ್ತಿ, ಅರಸಾಳು ವಲಯ ಅರಣ್ಯಾಧಿಕಾರಿಗಳು ಆನೆಯನ್ನು ಹಿಮ್ಮೆಟ್ಟಿಸುವ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಹಾಗೂ ಡ್ರೋನ್‌ ಕ್ಯಾಮೆರಾದ ಮೂಲಕ ಆನೆಗಳ ಜಾಡನ್ನು ಪತ್ತೆಹಚ್ಚುವ ಕಾರ್ಯವೂ ಸಾಗಿದೆ. ಕಾಡಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಶೀಘ್ರದಲ್ಲಿಯೇ ಆನಗಳನ್ನು ಹಿಮ್ಮೆಟ್ಟಿಸುತ್ತೇವೆ.

-ಬಾಬು ರಾಜೇಂದ್ರ ಪ್ರಸಾದ್, ಅರಸಾಳು ಆರ್‌ಎಫ್‌ಒ

- - -

ದಿ-7-ಆರ್‌ಟಿಒ 1ಪಿ

ರಿಪ್ಪನ್‍ಪೇಟೆ ಸಮೀಪದ ಕಮದೂರು ಗ್ರಾಮದ ರೈತ ಕೀರ್ತಿಗೌಡ ಅಡಕೆ ಮತ್ತು ಬಾಳೆ ತೋಟದಲ್ಲಿ ಕಾಡಾನೆ ದಾಳಿ ನಡೆಸಿರುವುದು.