ಸವಣೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ವಿಫಲರಾಗಿರುವುದರಿಂದ ಆರೋಗ್ಯ ಸಿಬ್ಬಂದಿ ಅನಿವಾರ್ಯವಾಗಿ ಹಂತ ಹಂತವಾಗಿ ಮುಷ್ಕರ ಕೈಗೊಳ್ಳುವುದಾಗಿ ಸೋಮವಾರ ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ವೃಂದಗಳಲ್ಲಿ ಸುಮಾರು 36,397 ಅಧಿಕಾರಿ-ನೌಕರರು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಸುಮಾರು 6 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ, ವಯೋನಿವೃತ್ತಿ ಹಾಗೂ ಇತರೆ ಕಾರಣಗಳಿಂದ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಗೆ ಖಾಲಿ ಹುದ್ದೆಗಳು ಭರ್ತಿಯಾಗದೇ ಇರುವುದರಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆ ಭಾರೀ ಕೆಲಸದ ಒತ್ತಡ ಉಂಟಾಗಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.ಮೊದಲ ಹಂತ: ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಿಸ್ಪೆನ್ಸರಿಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದು, ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ ತುರ್ತು ಸೇವೆಗಳನ್ನು ಮಾತ್ರ ಮುಂದುವರಿಸಲಿದ್ದಾರೆ.ಎರಡನೇ ಹಂತ: ಮಾರ್ಚ್ 16ರಿಂದ ಬೇಡಿಕೆಗಳು ಈಡೇರುವವರೆಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅನಿರ್ದಿಷ್ಟಾವಧಿ ಗೈರುಹಾಜರಾಗುವ ಮೂಲಕ ಸಂಪೂರ್ಣ ಮುಷ್ಕರ ಕೈಗೊಳ್ಳಲಿದ್ದಾರೆ. ಸರ್ಕಾರವು ತಕ್ಷಣವೇ ಸಮಸ್ಯೆಗಳನ್ನು ಪರಿಹರಿಸಿ ಆರೋಗ್ಯ ಸೇವೆ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆಗೆ ಸಂಬಂಧಿಸಿದ ಈ ಮುಷ್ಕರ ಘೋಷಣೆ ರಾಜ್ಯದಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಕಲಾ ಜೆ., ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಸ್. ವೈ. ಹಿರೇಗೌಡ್ರ, ಡಾ. ನಟರಾಜ್., ಡಾ. ಜಗದೀಶ್ ಎಚ್.ಕೆ., ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಂದೇಶ ಲಾಡ್, ಎಂ.ವೈ ಪಟೇಲ್, ಎಸ್. ಎನ್. ಕಲ್ಲಮ್ಮನವರ, ನಾರಾಯಣ ದಾಯಿಪುಲೆ, ಪ್ರೇಮಾ ಚಳ್ಳಾಳ, ರಾಘವೇಂದ್ರ ತಡಹಾಳ, ವನಿತಾ ರಾಥೋಡ್, ಶಾಂತ ಮರಿಯಮ್ಮನವರ, ಜಗದೀಶ ಹಾವಣಗಿ, ಎಸ್.ಎಫ್ ಹನಕನಹಳ್ಳಿ ಹಾಗೂ ಇತರರು ಇದ್ದರು.