ಸ್ವಚ್ಛ ಕೊಡಗು ಅಭಿಯಾನವನ್ನು ನಿರಂತರವಾಗಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸ್ವಚ್ಛ ಕೊಡಗು ಅಭಿಯಾನವನ್ನು ನಿರಂತರವಾಗಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಮೀಪದ ಬೇಳೂರು ಗ್ರಾ.ಪಂ.ಗೆ ಭೇಟಿ ನೀಡಿದ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಅವರೊಂದಿಗೆ ಚರ್ಚೆ ನಡೆಸಿದರು.ಈ ಸಂದರ್ಭ ಮಾತನಾಡಿದ ಪಿಡಿಓ, ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಿದರೆ ಕಸದ ಸಮಸ್ಯೆ ಅರ್ಧ ನಿವಾರಣೆಯಾಗುತ್ತದೆ. ಒಣ ಕಸವನ್ನು ಸಾರ್ವಜನಿಕರು ನೀಡಿದರೆ ಅದನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇ ಮಾಡಲು ಸಹಕಾರಿಯಾಗಲಿದೆ ಎಂದರು.ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೇಳೂರು ಗ್ರಾ.ಪಂ. ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಬೇಕು. ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಕೆ, ಕಸ ಸಂಗ್ರಹ ತೊಟ್ಟಿ ನಿರ್ಮಾಣ, ಕೋಳಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಸಿ.ಸಿ. ಕ್ಯಾಮೆರಾ ಅಳವಡಿಸಬೇಕು ಎಂದು ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಹೇಳಿದರು.ನಂತರ ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗ, ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಕೋಳಿ ಮಾಂಸದ ಅಂಗಡಿಗಳಿದ್ದು, ಬಹುತೇಕ ಅಂಗಡಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೂಟೆ ಕಟ್ಟಿ ಎಸೆಯಲಾಗುತ್ತಿದೆ. ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ವೈಜ್ಞಾನಿಕ ವಿಲೇವಾರಿ ಮಾಡುತ್ತಿಲ್ಲ ಎಂದು ಗಮನ ಸೆಳೆದರು. ಕೋಳಿ ಮಾಂಸದ ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅವೈಜ್ಞಾನಿಕ ವಿಲೇವಾರಿ ಮಾಡಿದರೆ ಪರವಾನಗಿ ರದ್ದುಗೊಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರು ಕಂಡುಬಂದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪಿಡಿಓ ಹೇಳಿದರು. ಹೆಚ್ಚು ತ್ಯಾಜ್ಯಗಳನ್ನು ಹೊರಭಾಗದಿಂದ ಬರುವವರು ರಸ್ತೆ ಬದಿ ಎಸೆಯುತ್ತಿದ್ದಾರೆ. ಅಂತಹ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಿ, ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ತ್ಯಾಜ್ಯ ಸಮಸ್ಯೆ ನಿವಾರಣೆ ಸಂಬಂಧ ತಾಲೂಕು ತಹಸೀಲ್ದಾರ್‌ರನ್ನು ಒಳಗೊಂಡಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಲು ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಅರುಣ್ ಹೇಳಿದರು.ನಂತರ ಹಾನಗಲ್ಲು ಗ್ರಾಮ ಪಂಚಾಯಿತಿಗೆ ತೆರಳಿ ಅಭಿವೃದ್ಧಿ ಅಧಿಕಾರಿ ಹೆಚ್.ಪಿ. ಸ್ಮಿತಾ ಅವರೊಂದಿಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ತ್ರಿಶೂಲ್ ಹರಗ, ನಾವು ಪ್ರತಿಷ್ಠಾನದ ಸುಮನ, ಗೌತಮ್ ಕಿರಗಂದೂರು ಇದ್ದರು.