ಭದ್ರಾ ಮೇಲ್ದಂಡೆ ಅನುದಾನಕ್ಕೆ ಹೈಕೋರ್ಟ್ ಮೊರೆ

| N/A | Published : Sep 04 2025, 02:00 AM IST

ಭದ್ರಾ ಮೇಲ್ದಂಡೆ ಅನುದಾನಕ್ಕೆ ಹೈಕೋರ್ಟ್ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿದರು.

  ಚಿತ್ರದುರ್ಗ :  ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ ಬಿಡುಗಡೆ ಸಂಬಂಧಿಸಿದಂತೆ ಹೈಕೋರ್ಟ್‌ ಮೊರೆ ಹೋಗಲು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಿರ್ಧರಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯರು, ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದಾಸೀನ ಮನೋಭಾವ ಹಾಗೂ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. 5300 ಕೋಟಿ ರು ಅನುದಾನ ನೀಡಲಿ ಎಂದು ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿದ್ದರೆ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗಾಗಿ ತಾಂತ್ರಿಕ ಮಾಹಿತಿಗಳ ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಿದೆ. ಎರಡೂ ಸರ್ಕಾರದ ನಡೆಗಳಿಂದಾಗಿ ಭದ್ರಾ ಮೇಲ್ದಂಡೆ ಸೊರಗಿದೆ.

ಹಾಲಿ ಶರವೇಗದಲ್ಲಿ ನಡೆಯುತ್ತಿರುವ ತುಂಗಭದ್ರಾ ಹಿನ್ನೀರು ಕುಡಿವ ನೀರಿನ 2.5 ಸಾವಿರ ಕೋಟಿ ರು. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿದೆ. ವಿಜಯ ನಗರ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಿಗೆ ತುಂಗ ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.

ಈ ಯೋಜನೆಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡಿರುವುದರ ಬಗ್ಗೆ ರಾಜ್ಯ ಸರ್ಕಾರ ತನ್ನ ನೈತಿಕ ಆಯಾಮದಲ್ಲಿ ಸಮಜಾಯಿಷಿ ನಿೀಡಿದೆ. ಕೂಡ್ಲಿಗಿ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರಗಳು ಪರಿಶಿಷ್ಟ ಪಂಗಡ( ಎಸ್ಟಿ)ಕ್ಕೆ ಹಾಗೂ ಪಾವಗಡೆ ಪರಿಶಿಷ್ಟ ಜಾತಿ(ಎಸ್ಸಿ) ಗೆ ಮೀಸಲಾಗಿದೆ. ಹಾಗಾಗಿ ಈ ಸಮುದಾಯಗಳಿಗೆ ಕಾಯ್ದಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

ತುಂಗ ಭದ್ರಾ ಹಿನ್ನೀರು ಕಾಮಗಾರಿಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಲು ರಾಜ್ಯ ಸರ್ಕಾರ ಹರಿಯ ಬಿಟ್ಟ ಆಲೋಚನಾ ಕ್ರಮಗಳನ್ನು ಭದ್ರಾ ಮೇಲ್ದಂಡೆಗೂ ಪರಿಗಣಿಸಬೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸುತ್ತದೆ.

ಭದ್ರಾ ಮೇಲ್ದಂಡೆ ವ್ಯಾಪ್ತಿಗೆ ಹೊಳಲ್ಕೆರೆ, ಪಾವಗಡ(ಪರಿಶಿಷ್ಟ ಜಾತಿ), ಮೊಳಕಾಲ್ಮುರು, ಚಳ್ಳಕೆರೆ, ಜಗಳೂರು (ಪರಿಶಿಷ್ಟ ಪಂಗಡ) ಸೇರಿ ಐದು ಮೀಸಲು ಕ್ಷೇತ್ರಗಳು ಬರುತ್ತವೆ. ಸಾಲದೆಂಬಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹಾಗಾಗಿ ತುಂಗ ಭದ್ರಾ ಹಿನ್ನೀರು ಯೋಜನೆಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿದ ರೀತಿ ಭದ್ರಾ ಮೇಲ್ದಂಡೆಗೂ ವಿನಿಯೋಗಿಸಬಹುದಾಗಿದೆ.

ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಕಳೆದ ಎರಡು ವರ್ಷಗಳಲ್ಲಿ 32 ಸಾವಿರ ಕೋಟಿ ರು. ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡಿರುವುದರ ಬಗ್ಗೆ ಶಾಸನ ಸಭೆಯಲ್ಲಿಯೇ ಸಿಎಂ ಹೇಳಿಕೆ ನೀಡಿದ್ದಾರೆ. ಗ್ಯಾರಂಟಿಗಳಿಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಳ್ಳುವುದಾದರೆ ಭದ್ರಾ ಮೇಲ್ದಂಡೆಗೆ ಏಕಿಲ್ಲವೆಂದು ಲಿಂಗಾರೆಡ್ಡಿ ಪ್ರಶ್ನೆ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗ ಉದಾಸೀನ ಮನೋಭಾವ ಗಮನಿಸಿದರೆ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಇನ್ನೊಂದು ದಶಕ ಬೇಕೆನಿಸುತ್ತದೆ. ಅಲ್ಲದೇ ಯೋಜನಾವ ವೆಚ್ಚವು ಜಾಸ್ತಿಯಾಗುತ್ತದೆ. ಯೋಜನಾ ವ್ಯಾಪ್ತಿಯಲ್ಲಿ ಬರುವ ಶಾಸಕರು ತಕ್ಷಣವೇ ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೇರಿ ಎಸ್ಸಿಪಿ, ಟಿಎಸ್ಪಿ ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸುವಂತೆ ಸಮಿತಿ ಆಗ್ರಹಿಸುತ್ತದೆ.

ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆ ಸಂಬಂಧ ಹೈಕೋರ್ಟ್ ಮೊರೆ ಹೋಗಲು ವಕೀಲರ ಸಂಪರ್ಕಿಸಲಾಗಿದೆ. ತುಂಗ ಭದ್ರಾ ಹಿನ್ನೀರು ಯೋಜನೆಗೆ ಎಸ್ಪಿಪಿ ಟಿಎಸ್ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದ್ದು ಅದೇ ರೀತಿ ಭದ್ರಾ ಮೇಲ್ದಂಡೆಗೂ ಬಳಕೆ ಮಾಡುವಂತೆ ಸಾರ್ವಜನಿಕ ಹಿತಾಸಕ್ತಿ ರಿಟ್ ಸಲ್ಲಿಸುವುದಾಗಿ ಬಿ.ಎ.ಲಿಂಗಾರೆಡ್ಡಿ ಹೇಳಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

Read more Articles on