ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಮನವಿ

| Published : Jun 23 2024, 02:11 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಬಿ.ಪಟ್ಟಿಹಾಳ ಕ್ರಾಸ್ ಹತ್ತಿರದ ಮುಲ್ಲಾನ ಮಡ್ಡಿಯಲ್ಲಿ ವಾಸಿಸುವ ಅಲೆಮಾರಿ ಚಿನ್ನದಾಸ ಬುಡಕಟ್ಟು ಜನಾಂಗದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಒತ್ತಾಯಿಸಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಮಾರುತಿ ಕೊಂಡೂರು ನೇತೃತ್ವದಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬೆಳವಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಬಿ.ಪಟ್ಟಿಹಾಳ ಕ್ರಾಸ್ ಹತ್ತಿರದ ಮುಲ್ಲಾನ ಮಡ್ಡಿಯಲ್ಲಿ ವಾಸಿಸುವ ಅಲೆಮಾರಿ ಚಿನ್ನದಾಸ ಬುಡಕಟ್ಟು ಜನಾಂಗದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಒತ್ತಾಯಿಸಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಮಾರುತಿ ಕೊಂಡೂರು ನೇತೃತ್ವದಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬೆಳವಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಾರುತಿ ಕೊಂಡೂರ ಮಾತನಾಡಿ, ನಮ್ಮ ಅಲೆಮಾರಿ ಜನಾಂಗದ ಕುಟುಂಬ ವರ್ಗದವರು ಸುಮಾರು 15 ರಿಂದ 20 ವರ್ಷರ್ಗಳಿಂದ ಬೆಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ. 221 ರಲ್ಲಿರುವ ಕೆ.ಬಿ.ಪಟ್ಟಿಹಾಳ ಕ್ರಾಸ್ ಮುಲ್ಲಾನ ಮಡ್ಡಿಯ ಜಾಗದಲ್ಲಿ ಬಟ್ಟೆಯಿಂದ ಹಾಗೂ ಪ್ಲಾಸ್ಟಿಕ್ ತಾಡಪತ್ರೆಗಳನ್ನು ಬಳಸಿಕೊಂಡು ಗುಡಿಸಲುಗಳನ್ನು ನಿರ್ಮಿಸಿಕೊಂಡು ಮಳೆ ಬಿಸಿಲು, ಚಳಿಯನ್ನು ಲೆಕ್ಕಿಸದೇ ಉಪ ಜೀವನವನ್ನು ಸಾಗಿಸುತ್ತಿದ್ದು ಸದರಿ ಗುಡಿಸಲಲ್ಲಿ ಯಾವದೇ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ವ ಬೀದಿ ದೀಪಗಳ ಸೌಲಭ್ಯಗಳಿಂದ ತೀರಾ ವಂಚಿತಗೊಂಡು ಮಕ್ಕಳ ಶೈಕ್ಷಣಿಕತೆಯಿಂದ ವಂಚಿತಗೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ನಮ್ಮನ್ನು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ದೂರಿದರು. ಈ ಕುರಿತು ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಈ ಕುರಿತು ಮುಖ್ಯ ಮಂತ್ರಿಗಳಿಗೆ, ಗೃಹ ಸಚಿವರಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಹ ನಮ್ಮ ಮನವಿಯನ್ನು ಕೊಟ್ಟಿದ್ದು ಇದಕ್ಕೆ ಸ್ಫಂದಿಸಿದ ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ನೀಡದೇ ಜಾರಿಕೊಳ್ಳುತ್ತಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದಿದ್ದರೇ ಮುಂಬರುವ ದಿನಗಳಲ್ಲಿ ತಾಪಂ, ಜಿಪಂ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಹಣಮಂತ ಟಿಕೋಳ, ಪರಶುರಾಮ ರಾಯಬಾಗ, ಶಿವಾನಂದ ಸೊಲಬನ್ನವರ, ದುರಗಪ್ಪ ಚನ್ನದಾಸರ, ಮುರಳಿ ದತ್ತವಾಡ, ಹಣಮಂತ ಹುರಳಿ, ನಾಗರಾಜ ಶಿಂದೊಳ್ಳಿ, ದೇವಶೆಟ್ಟಿ ಬೆಳವಾಡಿ ಸೇರಿದಂತೆ ಜನಾಂಗದ ಹಲವಾರು ಜನರು ಉಪಸ್ಥಿತರಿದ್ದರು.