ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋಚಿಮುಲ್ ಎಂಡಿಗೆ ಮನವಿ

| Published : Apr 04 2024, 01:00 AM IST

ಸಾರಾಂಶ

ಇತ್ತೀಚೆಗೆ ಸಂಘಗಳಲ್ಲಿ ಆನ್‌ಲೈನ್ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಒಕ್ಕೂಟದಿಂದ ನಿರ್ದೇಶನ ನೀಡಲಾಗಿದ್ದು, ಮೊದಲು ಒಕ್ಕೂಟದಲ್ಲಿ ಅಳವಡಿಸಿ ಆ ಬಳಿಕ ಸಂಘಗಳಿಗೆ ನಿರ್ದೇಶನ ನೀಡಬೇಕು. ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಕ್ಲಿಷ್ಟಕರ ಪರಿಸ್ಥಿತಿಯನ್ನು ಸಂಘಗಳಲ್ಲಿ ಎದುರಿಸುತ್ತಿದ್ದು, ಇದಕ್ಕೆ ತಾವು ಒಕ್ಕೂಟದ ಗುಣಮಟ್ಟ ನಿಯಂತ್ರಣ ವಿಭಾಗಕ್ಕೆ ೦.೫ ಎಸ್.ಎನ್.ಎಫ್. ಅನ್ನು ಸರಿದೂಗಿಸಿ ಕೊಡಲು ನಿರ್ದೇಶನ ನೀಡಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಹಾಲು ಉತ್ಪಾದಕರ ಮತ್ತು ಸಂಘಗಳ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಲಾರ ತಾಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಿಬ್ಬಂದಿ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ರಾಸುಗಳ ನಿರ್ವಹಣೆಯು ಬಹಳ ಕಷ್ಟಕರವಾಗಿದ್ದು, ಪ್ರತಿವರ್ಷದ ವಾಡಿಕೆಯಂತೆ ಏರಿಸಿ ಈಗಲೂ ಹಾಲಿನ ದರ ಲೀ.ಗೆ ಕನಿಷ್ಠ ೩೮ ರು.ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಸಂಘಗಳಲ್ಲಿ ಆನ್‌ಲೈನ್ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಒಕ್ಕೂಟದಿಂದ ನಿರ್ದೇಶನ ನೀಡಲಾಗಿದ್ದು, ಮೊದಲು ಒಕ್ಕೂಟದಲ್ಲಿ ಅಳವಡಿಸಿ ಆ ಬಳಿಕ ಸಂಘಗಳಿಗೆ ನಿರ್ದೇಶನ ನೀಡಬೇಕು. ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಕ್ಲಿಷ್ಟಕರ ಪರಿಸ್ಥಿತಿಯನ್ನು ಸಂಘಗಳಲ್ಲಿ ಎದುರಿಸುತ್ತಿದ್ದು, ಇದಕ್ಕೆ ತಾವು ಒಕ್ಕೂಟದ ಗುಣಮಟ್ಟ ನಿಯಂತ್ರಣ ವಿಭಾಗಕ್ಕೆ ೦.೫ ಎಸ್.ಎನ್.ಎಫ್. ಅನ್ನು ಸರಿದೂಗಿಸಿ ಕೊಡಲು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಒಕ್ಕೂಟ ವ್ಯಾಪ್ತಿಯ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ೮೦ ಸಿಬ್ಬಂದಿಗೆ ೬೨ ವರ್ಷ ವಯಸ್ಸು ಆಗಿದ್ದು, ನಿವೃತ್ತಿ ಹಣ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ತೊಂದರೆಯಾಗಿದ್ದು, ಒಕ್ಕೂಟದಿಂದ ನಿವೃತ್ತಿ ಮೊತ್ತವನ್ನು ಕೂಡಲೇ ನೀಡಬೇಕು. ಬೆಂಗಳೂರು, ಚಾಮರಾಜನಗರ ಒಕ್ಕೂಟ ವ್ಯಾಪ್ತಿಗಳಲ್ಲಿ ವಯೋ ನಿವೃತ್ತಿಯಾದ ಸಿಬ್ಬಂದಿಗೆ ನೀಡುವ ೫ ಲಕ್ಷ ರು. ನಿವೃತ್ತಿ ಮೊತ್ತವನ್ನು ನಮ್ಮ ಒಕ್ಕೂಟ ವ್ಯಾಪ್ತಿಯಲ್ಲೂ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯುತ್, ಡೀಸೆಲ್ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಸಿ ನಿರ್ವಹಣಾ ವೆಚ್ಚವನ್ನು ಪ್ರತಿ ಲೀ.ಗೆ ಕನಿಷ್ಠ ೫೦ ಪೈಸೆಗೆ ಏರಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಖಂಡನೀಯವಾಗಿದ್ದು, ಇನ್ನಾದರೂ ಎಚ್ಚೆತ್ತು ಸಮಸ್ಯೆ ಆಲಿಸದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರು, ಕಾರ್ಯದರ್ಶಿಗಳಿಂದ ಒಕ್ಕೂಟದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ತೊಂಡಾಲ ಮಂಜು, ಪ್ರಧಾನ ಕಾರ್ಯದರ್ಶಿ ಚೆಲುವನಹಳ್ಳಿ ತಿಮ್ಮೇಗೌಡ, ಗೌರವಾಧ್ಯಕ್ಷ ಚಿಟ್ನಹಳ್ಳಿ ಗೋಪಾಲ್, ಮುಖಂಡರಾದ ಬಗಲಹಳ್ಳಿ ನಾಗೇಶ್, ಚಿಂತಾಮಣಿ ಕೆಂಪರೆಡ್ಡಿ, ವಕ್ಕಲೇರಿ ನಾಗರಾಜ್, ಮುದುವಾಡಿ ಹೊಸಹಳ್ಳಿ ಮೋಹನ್, ಶಾನುಭೋಗನಹಳ್ಳಿ ಗೋಪಾಲ್, ಅಗ್ನಿಹಳ್ಳಿ ಶ್ರೀನಿವಾಸ್, ರಾಂಪುರ ವೇಣುಗೋಪಾಲ್, ಹೋಳೂರು ಶ್ರೀರಾಮರೆಡ್ಡಿ, ಐತರಾಸನಹಳ್ಳಿ ರಾಜಗೋಪಾಲ್, ಬೆಣ್ಣಂಗೂರು ವೆಂಕಟೇಶ್, ಆಲಹಳ್ಳಿ ಮಂಜುನಾಥ್, ಮೈಲಂಡಹಳ್ಳಿ ಶ್ರೀರಾಮ್ ಇದ್ದರು.