ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನ. ೩೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ರೈತ ಆಕ್ರೋಶ ಪ್ರತಿಭಟನೆ ಬಗ್ಗೆ ಮಾಹಿತಿ‌ ನೀಡಿ‌ ಪ್ರತಿ ತಾಲೂಕಿನಿಂದ ತಲಾ ೫೦ರಿಂದ ೧೦೦ ಸಂಖ್ಯೆಯಲ್ಲಿ‌ ಕಿಸಾನ್ ಸದಸ್ಯರು, ರೈತರು ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು.

ಯಲ್ಲಾಪುರ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಸಭೆ ಜಿಲ್ಲಾಧ್ಯಕ್ಷ ಶಿವರಾಮ್ ಗಾಂವ್ಕರ್ ಅವರ ಅಧ್ಯಕ್ಷತೆಯಲ್ಲಿ‌ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಕರ್ನಾಟಕ ಪ್ರದೇಶ ಸಂಘಟನಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ‌ ಮಾರ್ಗದರ್ಶನ ಮಾಡಿ, ಬರಗಾಲ ಸ್ಥಿತಿ, ಜಿಲ್ಲೆಯ ರೈತರ ಸ್ಥಿತಿಗತಿ, ಕಬ್ಬು ಅಡಕೆ ಬೆಳೆಗಾರರ ಸ್ಥಿತಿಗತಿ ಜತೆಗೆ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆಯುವ ಬಗ್ಗೆ ವಿವರಿಸಿದರು.

ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನ. ೩೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ರೈತ ಆಕ್ರೋಶ ಪ್ರತಿಭಟನೆ ಬಗ್ಗೆ ಮಾಹಿತಿ‌ ನೀಡಿ‌ ಪ್ರತಿ ತಾಲೂಕಿನಿಂದ ತಲಾ ೫೦ರಿಂದ ೧೦೦ ಸಂಖ್ಯೆಯಲ್ಲಿ‌ ಕಿಸಾನ್ ಸದಸ್ಯರು, ರೈತರು ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸುವಂತೆ ತಿಳಿಸಿದರು. ಈ ಬಗ್ಗೆ ಗ್ರಾಮಸಮಿತಿಗಳ ಪ್ರಮುಖರನ್ನು ಭೇಟಿ ಮಾಡಿ ಪ್ರತಿಭಟನೆಗೆ ಹೊರಡಿಸುವ ಕೆಲಸವಾಗಬೇಕು ಎಂದರು.

ನದಿ ತಿರುವು ಸೇರಿದಂತೆ ಪರಿಸರಕ್ಕೆ ಜಿಲ್ಲೆಯ ಜನಜೀವನ, ರೈತ ಸಮುದಾಯಕ್ಕೆ ತೊಂದರೆಯುಂಟು ಮಾಡುವ ಯಾವುದೇ ಯೋಜನೆಯನ್ನು ಜಿಲ್ಲೆಗೆ ಸರ್ಕಾರ ತರಕೂಡದೆಂದು ಸಭೆ ಒಕ್ಕೊರಲಿನ ಆಗ್ರಹ ಮಾಡಿತು. ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಹೊಂಡ ಮುಚ್ಚಲು ಸರ್ಕಾರ ಶೀಘ್ರ ಕ್ರಮ ಅನುಸರಿಸಬೇಕು. ಸರಿಯಾಗಿ ಬೆಳೆವಿಮೆ ಮಂಜೂರು ಮಾಡಿ ವಿತರಣೆಯಾಗಬೇಕು. ದನಕರುಗಳಿಗೆ ವಿಶೇಷವಾಗಿ ಸಿದ್ಧ ಮೇವಿನ ಪೂರೈಕೆ ಮಾಡಬೇಕು ಎಂದರು.

ವಿದ್ಯುತ್ ಗೆ ಸಾಕಷ್ಟು ತ್ಯಾಗ ಮಾಡಿದ ಜಿಲ್ಲೆಗೆ ಯಾವುದೇ ಕಾರಣದಿಂದಲೂ ಬೇಸಿಗೆಯಲ್ಲಿ ವಿದ್ಯುತ್ ಖೋತಾ ಪೊರೈಕೆಯಲ್ಲಿ ವ್ಯತ್ಯಯ ಮಾಡಬಾರದೆಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನತೆಗೆ ಸರಿಯಾದ ಮಾಹಿತಿಯಿಲ್ಲ. ಇದರ ಸಾಧಕ ಬಾಧಕಗಳೇನು ಎಂಬುದರ ಅರಿವು ಮೂಡಿಸಲು ಕಿಸಾನ್ ಸಂಘ ಆಯಾ ತಾಲೂಕು ಸಮಿತಿಯಿಂದ ತಜ್ಞರಿಂದ ಕಸ್ತೂರಿರಂಗನ್ ವರದಿ ಅರಿವು ಕಾರ್ಯಕ್ರಮ ಯೋಜಿಸಬೇಕೆಂದು ಹೇಳಿದರು.

ಜೋಯಿಡಾ ತಾಲೂಕನ್ನು ಅಭಯಾರಣ್ಯ ಎಂದು ಸರ್ಕಾರ ಮಾಡಿದಾಗ್ಯೂ ಅದನ್ನು ವ್ಯವಸ್ಥಿತವಾಗಿ ಜಾರಿಯನ್ನು ಮಾಡದೇ ಜನರ ಜೀವ ಹಿಂಡಲಾಗುತ್ತಿದೆ. ಜನರ ನೋವನ್ನು ಇಲಾಖೆ ಕೇಳುತ್ತಿಲ್ಲ. ಪ್ರಾಣಿಗಳೊಂದಿಗೆ ಭಯದೊಂದಿಗೆ ಬದುಕಬೇಲಾದ ಅನಿವಾರ್ಯತೆ ಸೃಷ್ಟಿ ಮಾಡಲಾಗಿದೆ. ಜನರ ಬದುಕನ್ನು ಅತಂತ್ರಗೊಳಿಸಿದೆ ಎಂದು‌ ಶ್ರೀಧರ ಭಾಗ್ವತ, ಆರ್.ಎನ್. ಹೆಗಡೆ ಗುಂದ ತಿಳಿಸಿದರು.

ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪ್ರದೇಶ ಕಾರ್ಯಕಾರಿಣಿ ಸದಸ್ಯ ಭಾ.ನಾ. ಮಾಧವ ಹೆಗಡೆ, ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ ಭಟ್ಟ ಬಾಳೆಗದ್ದೆ, ಜಿಲ್ಲಾ ಪದಾಧಿಕಾರಿಗಳಾದ ಆರ್.ಟಿ. ಭಾಗ್ವತ್ ಭಟ್ಕಳ, ರಾಮಚಂದ್ರ ಕವಡಿಕೇರಿ, ಗಣಪತಿ‌ ಪಟಗಾರ್ ಕುಮಟಾ, ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್, ಯಲ್ಲಾಪುರ ತಾಲೂಕಾಧ್ಯಕ್ಷ ವಿಘ್ನೇಶ್ವರ ಭಟ್ಟ ಹೊಸ್ತೋಟ ಮತ್ತಿತರರು‌ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿ, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನ. ೩೦ಕ್ಕೆ ನಡೆಯುವ ರೈತ ಆಕ್ರೋಶ ಪ್ರತಿಭಟನೆಯ ಮಾಹಿತಿ ನೀಡಿ ಜಿಲ್ಲೆಯಿಂದ ೫೦೦ ಸದಸ್ಯರು ತೆರಳುವ ಬಗ್ಗೆ ತಿಳಿಸಿದರು. ಗಣಪತಿ ಪಟಗಾರ್ ಕುಮಟಾ ವಂದಿಸಿದರು.