ಹೆದ್ದಾರಿಗಳ ಅಭಿವೃದ್ಧಿಗೆ ಸಚಿವ ಗಡ್ಕರಿಗೆ ಮನವಿ

| Published : Sep 26 2025, 01:00 AM IST

ಸಾರಾಂಶ

ಗುರುವಾರ ನವದೆಹಲಿಯಲ್ಲಿ ಸಚಿವ ಗಡ್ಕರಿಯವರನ್ನು ಭೇಟಿ ಮಾಡಿದ ಸಚಿವ ಸೋಮಣ್ಣ, ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.

ತುಮಕೂರು: ಸ್ಮಾರ್ಟ್ ಸಿಟಿ ತುಮಕೂರು ಯೋಜನೆಯ ಹಂತ 2ರ ಮಲ್ಲಸಂದ್ರದಿಂದ ವಸಂತನರಸಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರ್ಯಸಾಧ್ಯತೆಯನ್ನು ಮರುಪರಿಶೀಲಿಸಲು ಅಥವಾ ತಜ್ಞರ ಸಮಿತಿ ನಿಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.

ಗುರುವಾರ ನವದೆಹಲಿಯಲ್ಲಿ ಸಚಿವ ಗಡ್ಕರಿಯವರನ್ನು ಭೇಟಿ ಮಾಡಿದ ಸಚಿವ ಸೋಮಣ್ಣ, ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು. ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ-ರಾಯದುರ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡುವಂತೆ ಕೋರಿದರು.288 ಕಿ.ಮೀ ಉದ್ದದ 13,139 ಕೋಟಿ ರು. ವೆಚ್ಚದ ಬೆಂಗಳೂರು ನಗರ ಸಂಚಾರ ದಟ್ಟಣೆ ನಿವಾರಿಸಲು ಭಾರತ್ ಮಾಲಾ ಯೋಜನೆಯಡಿ ನಿರ್ಮಿಸಲುದ್ದೇಶಿಸಲಾದ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ದಾಬಸ್‌ಪೇಟೆ-ದೊಡ್ಡಬಳ್ಳಾಪುರ-ಹೊಸಕೋಟೆ ಸಂಪರ್ಕಿಸುವ 143.172 ಕೀ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ದಾಬಸ್‌ಪೇಟೆ ಮಾಗಡಿ-ರಾಮನಗರ-ಕನಕಪುರ-ಮುದಗದಪಲ್ಲಿ ಸಂಪರ್ಕಿಸುವ 144 ಕಿಮೀ ಉದ್ದದ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನು ಅನುಮೋದಿಸಲಾಗಿದ್ದು ಭೂಮಾಲೀಕರಿಗೆ ಪರಿಹಾರ ವಿತರಣೆ ಬಾಕಿ ಇದೆ. ಸುಮಾರು 150 ಹಳ್ಳಿಗಳ ವ್ಯಾಪ್ತಿಯ ಭೂಮಾಲಿಕರಿಗೆ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಬಾಕಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಸಚಿವ ಸೋಮಣ್ಣನವರು ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದರು.