ಸಾರಾಂಶ
ದೈವಜ್ಞ ಬ್ರಾಹ್ಮಣರ ಚಿನ್ನ – ಬೆಳ್ಳಿ ಕೆಲಸಗಾರರ ಸಂಘದ ಮುಖಂಡರು ಮಂಗಳವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕನ್ನಡ ಪ್ರಭ ವಾರ್ತೆ ಮಂಗಳೂರುದೈವಜ್ಞ ಬ್ರಾಹ್ಮಣ ಸಮುದಾಯವನ್ನು ಕರ್ನಾಟಕ ಸರ್ಕಾರದ ಶಿಕ್ಷಣದ ಆರ್ ಟಿಇ, ಸ್ಕಾಲರ್ ಶಿಪ್ ಇತ್ಯಾದಿಗೆ ಸಂಬಂಧಿಸಿದ SATS ವೆಬ್ ಸೈಟ್ ನಲ್ಲಿ ಇತರೆ ಹಿಂದುಳಿದ ವರ್ಗ 2 ಎ ದಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿರುವುದು ಅನ್ಯಾಯವಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ದೈವಜ್ಞ ಬ್ರಾಹ್ಮಣರ ಚಿನ್ನ – ಬೆಳ್ಳಿ ಕೆಲಸಗಾರರ ಸಂಘ (ರಿ.) ದ ಮುಖಂಡರು ಮಂಗಳವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸಮುದಾಯದ ಮುಖಂಡರ ಅಹವಾಲನ್ನು ಆಲಿಸಿದ ಶಾಸಕರು, ಇದುವರೆಗೂ ದೈವಜ್ಞ ಬ್ರಾಹ್ಮಣ ಸಮಾಜ ಸಾಮಾಜಿಕವಾಗಿ ಒಬಿಸಿ 2ಎ ಪ್ರವರ್ಗದಲ್ಲಿ ಇತ್ತು. ಅದೇ ರೀತಿಯಲ್ಲಿ ಜಾತಿ ಪ್ರಮಾಣ ಪತ್ರವನ್ನೂ ಸಹ ಪಡೆಯಲಾಗಿದೆ. ಆದರೂ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ 2025 ರ ಹೊಸ ದಾಖಲಾತಿ ಪ್ರಕ್ರಿಯೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯವನ್ನು (519) ಒಬಿಸಿಯಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ ಎಂಬ ಸಮಾಜದ ಮುಖಂಡರ ಪ್ರಶ್ನೆ ನ್ಯಾಯಯುತವಾದುದು. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಹೊಸ ದಾಖಲಾತಿ ಪ್ರಕ್ರಿಯೆಯಲ್ಲಿನ ಲೋಪದೋಷವನ್ನು ಸರಿಪಡಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಜಿ. ಗೋಕರ್ಣಕರ್, ಕಾರ್ಯದರ್ಶಿ ದರ್ಶನ್ ಸಿ.ಶೇಟ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಜಿ. ಶೇಟ್, ಚೇತನ್ ಶೇಟ್, ಅರುಣ್ ಜಿ. ಶೇಟ್ ಮತ್ತಿತರರಿದ್ದರು.