ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕರ್ನಾಟಕ ರೈತ ಸಂಘ ಹಾಗೂ ದಲಿತ ಆದಿವಾಸಿ ಕೃಷಿ ಕಾರ್ಮಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು. ಮೂಲ ದಾಖಲೆಗಳಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಮನೆ ನಿವೇಶನ, ಭೂಮಿ ಹಕ್ಕು, ಕುಡಿಯುವ ನೀರು, ಸಾಲ ಸೌಲಭ್ಯಗಳನ್ನು ಕೊಡಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ವಿವಿಧ ಗ್ರಾಮ ಮತ್ತು ಹಾಡಿಗಳಲ್ಲಿ ವಾಸ ಮಾಡುತ್ತಿರುವ ನಮಗೆ ಸರ್ಕಾರ ಹೊಸ ಪಡಿತರ ಚೀಟಿಯನ್ನು ಕಳೆದ ೫ ವರ್ಷಗಳಿಂದ ನೀಡದ ಕಾರಣ ಹೆಚ್ಚಿನವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ದಾಖಲಾತಿಗಳು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರದ ಯಾವುದೇ ಯೋಜನೆಗಳು ನಮಗೆ ತಲುಪುತ್ತಿಲ್ಲ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸರಳ ಮಾರ್ಗದಲ್ಲಿ ಮೂಲ ದಾಖಲೆಗಳನ್ನು ಕೊಡಿಸಿಕೊಡಬೇಕು. ಬ್ಯಾಡಗೊಟ್ಟದಲ್ಲಿ ೩೫೪ ಕುಟುಂಬಗಳಿದ್ದು, ಈ ಸ್ಥಳಕ್ಕೆ ಮೂಲ ಸೌಕರ್ಯ ಒದಗಿಸಬೇಕು. ೭೦ ಮನೆಗಳು ಇಂದಿಗೂ ಪಾಳು ಬಿದ್ದಿವೆ, ಬಸವನಳ್ಳಿಯಲ್ಲೂ ಸಹ ಇದೇ ಪರಿಸ್ಥಿತಿ ಇದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.ದಲಿತ ಆದಿವಾಸಿ ಸಂಘದ ಜಿಲ್ಲಾಧ್ಯಕ್ಷ ಮುತ್ತ, ವಳಗುಂದ ಕುಮಾರ, ವೈ.ಎಂ. ಸುರೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಮನವಿಯನ್ನು ಸ್ವೀಕರಿಸಿದ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.