ಹಾನಗಲ್ಲ ತಾಲೂಕಿನಲ್ಲಿ ಕಬ್ಬು ಬೆಳೆಗಾರರಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕವು ಶಾಸಕ ಶ್ರೀನಿವಾಸ್ ಮಾನೆ ಅವರಿಗೆ ಮನವಿ ಸಲ್ಲಿಸಿತು.
ಹಾವೇರಿ: ಹಾನಗಲ್ಲ ತಾಲೂಕಿನಲ್ಲಿ ಕಬ್ಬು ಬೆಳೆಗಾರರಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕವು ಶಾಸಕ ಶ್ರೀನಿವಾಸ್ ಮಾನೆ ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ 25 ಲಕ್ಷ ಟನ್‌ಗಿಂತ ಹೆಚ್ಚು ಕಬ್ಬು ಬೆಳೆಯಲಾಗುತ್ತಿದ್ದು, ಮೂರು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಹಾನಗಲ್ ತಾಲೂಕಿನಲ್ಲಿ ಮಾತ್ರ 10 ಲಕ್ಷ ಟನ್‌ಗಿಂತ ಹೆಚ್ಚು ಕಬ್ಬು ಉತ್ಪಾದನೆಯಾಗುತ್ತಿದೆ. ಆದರೆ ಈ ವರ್ಷ ಬೇಸಿಗೆಯಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಬಳಿಕ ಮುಂಗಾರು ಮಳೆಯೂ ಕೈಕೊಟ್ಟ ಪರಿಣಾಮ ಕಬ್ಬಿನ ಇಳುವರಿ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಕಬ್ಬು ಬೆಳೆಯನ್ನೂ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಿ ರೈತರ ಹಿತ ಕಾಪಾಡಲು ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದರು.ಇದೇ ವೇಳೆ ಹಾನಗಲ್ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಅವರ ಅಧ್ಯಕ್ಷತೆಯಲ್ಲಿ ಕೆರೆ ತುಂಬಿಸುವ ಯೋಜನೆ, ಸಾಲಮನ್ನಾ, ಬೆಳೆ ವಿಮೆಯಲ್ಲಿನ ತಾಂತ್ರಿಕ ಸಮಸ್ಯೆಗಳ ನಿವಾರಣೆ ಹಾಗೂ ಬರಗಾಲ ಘೋಷಣೆ ಕುರಿತು ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ತಹಸೀಲ್ದಾರ್ ವಿಠಲ್ ಚೌಗಲಾ, ತಾಪಂ ಇಒ, ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಶಾಸಕ ಶ್ರೀನಿವಾಸ್ ಮಾನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ರೈತರು, ಕಳೆದ ವರ್ಷದ ಬೆಳೆ ವಿಮೆ ನೋಂದಣಿಗೆ ಎಂಟು ತಿಂಗಳು ಕಳೆದರೂ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ತಕ್ಷಣವೇ ವಿಮೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಅಲ್ಲದೆ, ಕಬ್ಬು ಬೆಳೆಯನ್ನೂ ಬೆಳೆ ವಿಮೆ ಯೋಜನೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಭುವನೇಶ್ವರ ಶಿಡ್ಲಾಪುರ, ಎಂ.ಎಸ್. ಪಾಟೀಲ, ಮರಿಗೌಡ ಪಾಟೀಲ, ಮಹಾಲಿಂಗಪ್ಪ ಬಿದರಹಳ್ಳಿ, ಚೆನ್ನಬಸಪ್ಪ ಹಾವಣಗಿ, ರುದ್ರಪ್ಪ ಹಣ್ಣಿ, ಮಾರುದ್ರಪ್ಪ ಕುಸುನೂರ, ಬಸವಂತಪ್ಪ ಮೇಳಹಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.