ಚುನಾವಣೆ ಕರ್ತವ್ಯದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಒದಗಿಸಲು ಮನವಿ

| Published : May 18 2024, 12:33 AM IST

ಸಾರಾಂಶ

ರಾಯಚೂರು ಡಿಸಿ ಕಚೇರಿಗೆ ಆಗಮಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಯಚೂರು: ಲೋಕಸಭಾ ಚುನಾವಣೆ ಕರ್ತವ್ಯದ ವೇಳೆ ಮೃತಪಟ್ಟ ಜಾಗೀರಜಾಡಲದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಜಗ್ಲಿ ಕುಟುಂಬಕ್ಕೆ 50 ಲಕ್ಷ ರು. ತುರ್ತು ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿ (ಬಿಎಲ್ಒ)ಯಾಗಿ ನಿಯೋಜನೆಗೊಂಡಿದ್ದ ಬಸವರಾಜ ಜಗ್ಲಿ ಮೇ 07ರಂದು ಕರ್ತವ್ಯನಿರತ ಸ್ಥಳದಲ್ಲಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲಿದ್ದರು, ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದರು. ಅವರ ಸಾವಿನಿಂದ ಕುಟುಂಬಕ್ಕೆ ತುಂಬ ಅಘಾತ ಉಂಟಾಗಿದೆ. ಕುಟುಂಬ ಸದಸ್ಯರ ಆತ್ಮಸ್ಥೈರ್ಯ ನೈತಿಕವಾಗಿ ಹಾಗೂ ಕುಟುಂಬ ನಿರ್ವಹಣೆಗೆ ₹50 ಲಕ್ಷ ತುರ್ತು ಪರಿಹಾರ ನೀಡಬೇಕು ಹಾಗೂ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಪದಾಧಿಕಾರಿಗಳಾದ ಮಲ್ಲೇಶ ಭಂಡಾರಿ, ರಾಜಶೇಖರ ಇದ್ದರು.