ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಬೆಂಬಲಿಸಲು ಮನವಿ

| Published : Apr 11 2025, 12:31 AM IST

ಸಾರಾಂಶ

ವಿಪ್ರರು ರಾಣಿಬೆನ್ನೂರಿನ ಕೋಟೆಯ ಶಂಕರಮಠ ಹಾಗೂ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಮತದಾನ ಕೇಂದ್ರ ತೆರೆಯಲಾಗಿದ್ದು, ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಲಾಯಿತು.

ಹಾವೇರಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಹಾವೇರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದು, ಜಿಲ್ಲೆಯಲ್ಲಿರುವ ವಿಪ್ರ ಸಮಾಜದವರು ಏ. 13ರಂದು ರಾಣಿಬೆನ್ನೂರಿನಲ್ಲಿ ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಬೆಂಬಲಿಸಬೇಕೆಂದು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ದತ್ತಾತ್ರೇಯ ನಾಡಿಗೇರ(ಭಾರಂಗಿ) ಮನವಿ ಮಾಡಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ರಾಣಿಬೆನ್ನೂರು ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆಯಿಂದ ಸಮಾಜದ ಏಳಿಗೆಗೆ ಶ್ರಮಿಸಿದ್ದೇನೆ. ಅಲ್ಲದೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇನೆ. ಹಿರಿಯರಾದ ಎಕೆಬಿಎಂಎಸ್‌ನ ಪ್ರಸ್ತುತ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಅವರಿಂದ ಪ್ರೇರಣೆಗೊಂಡು ಅವರ ಬೆಂಬಲಿತ ಅಭ್ಯರ್ಥಿಯಾಗಿ ಹಾಗೂ ಜಿಲ್ಲೆಯ ವಿಪ್ರರು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಇದರ ಜತೆಗೆ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಭಾನುಪ್ರಕಾಶ ಶರ್ಮಾ ಅವರನ್ನು ಬೆಂಬಲಿಸಲಾಗಿದ್ದು, ಜಿಲ್ಲೆಯ ವಿಪ್ರರು ರಾಣಿಬೆನ್ನೂರಿನ ಕೋಟೆಯ ಶಂಕರಮಠ ಹಾಗೂ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಮತದಾನ ಕೇಂದ್ರ ತೆರೆಯಲಾಗಿದ್ದು, ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹನುಮಂತನಾಯ್ಕ ಬದಾಮಿ, ನಾಗೇಶ ಕುಲಕರ್ಣಿ, ರಮೇಶ ಕಡಕೋಳ, ಗೋವಿಂದ ಚಿಮ್ಮಲಗಿ, ಶ್ರೀಪಾದ ಕುಲಕರ್ಣಿ, ಉದಯ ಕುಲಕರ್ಣಿ, ಉಮೇಶ ವಿಶ್ವರೂಪ, ಎಂ.ಆರ್. ಕುಲಕರ್ಣಿ, ವಾದಿರಾಜ ಗಲಗಲಿ, ಮನೋಜ ನರಗುಂದ, ರವೀಂದ್ರ ವರಾಹಗಿರಿ, ವಿನಯ ಬಂಕನಾಳ ಸೇರಿದಂತೆ ಇತರರಿದ್ದರು.ಅಲೆಮಾರಿಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

ಹಾವೇರಿ: ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಏ. 21 ಮತ್ತು 22ರಂದು ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿರುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಕೆ. ರವೀಂದ ಶೆಟ್ಟಿ ಮನವಿ ಮಾಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಪ್ರವರ್ಗ- 1ಕ್ಕೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳನ್ನೊಳಗೊಂಡ ಕುಟುಂಬಗಳು ಸುಮಾರು ವರ್ಷಗಳಿಂದ ಬೀದಿಬದಿ ಗುಡಾರಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿವೆ. ಜೀವನೋಪಾಯಕ್ಕಾಗಿ ಹಳ್ಳಿಗಳ ಮೇಲೆ ವ್ಯಾಪಾರಕ್ಕಾಗಿ ಬಾಂಡೆ ವ್ಯಾಪಾರ, ಸೂಜಿದಾರ, ದನ, ಕುರಿ, ಮೇಕೆ ಸಾಕಾಣಿಕೆ, ಬಲೆ ಹೆಣೆಯುವುದು ಹೀಗೆ ವಿವಿಧ ವೃತ್ತಿಗಳನ್ನು ಮಾಡುತ್ತಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಈ ಸಮುದಾಯಕ್ಕೆ ಸರ್ಕಾರ ವಿಶೇಷ ಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಒತ್ತಾಯಿಸಿದರು.ರಾಜ್ಯ ಸರ್ಕಾರ ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಸುಮಾರು 10 ವರ್ಷಗಳಿಂದ ಗುಡಿಸಲು, ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಜನರಿಗೆ ಪಹಣಿ ಹಕ್ಕುಪತ್ರ ನೀಡಬೇಕು. ಸಮಾಜದವರಿಗಾಗಿ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು. ಅಲೆಮಾರಿ ಅರೆ ಅಲೆಮಾರಿ ಸಮಾಜದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆಯಬೇಕು. ಖಾಸಗಿ ಕಾಲೇಜುಗಳಲ್ಲಿ ಉಚಿತ ಹಾಗೂ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಡಬೇಕು. ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಆನಂದ ಜಾಧವ, ಉಪಾಧ್ಯಕ್ಷ ವಿಠ್ಠಲ ನವಲೆ, ಗಿರೀಶ ಗಣಾಚಾರಿ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಪಾಂಡುರಂಗ ಪಿಸೆ ಇದ್ದರು.