ಸಾರಾಂಶ
ಲಕ್ಷ್ಮೇಶ್ವರ: ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜ ಸ್ವಾಮಿಗೆ ಬೆದರಿಕೆ ಒಡ್ಡಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಮಂಗಳವಾರ ಆದರಳ್ಳಿ ಗ್ರಾಮದ ನೂರಾರು ಮಹಿಳೆಯರು ಲಕ್ಷ್ಮೇಶ್ವರದ ಪೊಲೀಸ್ ಠಾಣೆಗೆ ಆಗಮಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆದ್ರಳ್ಳಿ ಗ್ರಾಮದ ಮಹಿಳೆಯರು, ಸಮೀಪದ ಆದರಹಳ್ಳಿ, ವಡ್ಡರ ಪಾಳಾ ಹಾಗೂ ನಾದಿಗಟ್ಟಿ ಗ್ರಾಮದ ಭೋವಿ ಸಮಾಜದ ಕೆಲವು ಅಕ್ರಮ ದಂಧೆಕೋರರು, ಪುಂಡರು ಕುಮಾರ ಮಹಾರಾಜ ಸ್ವಾಮಿಗಳ ಗಡೀಪಾರಿಗೆ ಒತ್ತಾಯಿಸಿದ್ದಾರೆ. ಅವರಿಗೆ ಬೆದರಿಕೆ ಹಾಕಿದ್ದಾರೆ. ಕುಮಾರ ಮಹಾರಾಜರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದ್ರಳ್ಳಿ ಗವಿಮಠದಲ್ಲಿ ನೆಲೆ ನಿಂತಿರುವ ಕುಮಾರ ಮಹಾರಾಜ ಶ್ರೀಗಳು ಗ್ರಾಮದ ಜನರ ಹಿತ, ಕಲ್ಯಾಣಕ್ಕಾಗಿ ಮತ್ತು ಇಲ್ಲಿನ ಜನರಿಗೆ ನೈತಿಕ ಬಲವಾಗಿ ಬದುಕಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.ಆದರಹಳ್ಳಿ ಗ್ರಾಮದ ಸುತ್ತಮುತ್ತಲೂ ಅನೇಕ ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವ ಅಕ್ರಮ ಕಲ್ಲು, ಮರಳು ಗಣಿಗಾರಿಕೆಯಿಂದ ಇಲ್ಲಿನ ಜನರು ಅನುಭವಿಸುತ್ತಿರುವ ಕಷ್ಟ-ನಷ್ಟ-ಅನ್ಯಾಯಗಳಿಗೆ ದನಿಯಾಗಿ ಶ್ರೀಗಳು ನಿಂತಿದ್ದಾರೆ. ಕೆಲವೊಂದು ಭೋವಿ ಸಮಾಜದ ದಂಧೆಕೋರರು, ಪುಂಡರು ಕುಮಾರ ಮಹಾರಾಜರಿಗೆ ಮಠ ಬಿಟ್ಟು ತೊಲಗಿ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಭೋವಿ, ಬಂಜಾರ, ಹರಿಜನ, ತಳವಾರ, ಲಿಂಗಾಯತ ಹೀಗೆ ಎಲ್ಲ ಸಮಾಜದವರು ಗ್ರಾಮದಲ್ಲಿ ಪರಸ್ಫರ ಅನ್ಯೋನ್ಯವಾಗಿದ್ದೇವೆ. ಕೆಲವು ಪುಂಡರು ಸಮಾಜಗಳ ನಡುವೆ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಕ್ರಮ ದಂಧೆಗೆ ಅಡ್ಡಿಯಾಗಿರುವ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅವರನ್ನು ಇಲ್ಲಿಂದ ತೆರವುಗೊಳಿಸುವ ದುರುದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ನಡೆಸುತ್ತಿವೆ. ಶ್ರೀಗಳು ಮಠದಲ್ಲಿಯೇ ಇರಬೇಕು, ಅದಕ್ಕಾಗಿ ಶ್ರೀಗಳ ಪರವಾದ ಹೋರಾಟಕ್ಕೆ ತಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಈ ಹಿನ್ನೆಲೆ ಆದರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಮಾ. ೭ರಂದು ಆದರಹಳ್ಳಿ ಗ್ರಾಮದಿಂದ ಗದಗ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಶ್ರೀಗಳಿಗೆ ಮತ್ತು ಭಕ್ತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಕೋರಿದರು.ಈ ವೇಳೆ ಲಂಬಾಣಿ ಸಮಾಜದ ಮಹಿಳೆ ಗೀತಾ ನಾಯಕ, ಶಾರದಾ ಕಾರಬಾರಿ, ಸತ್ಯಮ್ಮ ತಳವಾರ, ಚಿಗವ್ವ ತಳವಾರ, ಕಮಲವ್ವ ಪಾಟೀಲ, ಬಸಮ್ಮ ಪಾಟೀಲ, ನೀಲವ್ವ ಅಂಬಿಗೇರ, ಬಸವೇಣವ್ವ ಪಾಟೀಲ, ಶಾರವ್ವ ಹರಿಜನ, ಉಡಚವ್ವ, ಹರಿಜನ, ರತ್ನವ್ವ ತಳವಾರ, ಮಂಜವ್ವ ರಾಹುತ, ನಿರ್ಮಲಾ ರಾಹುತ, ಶಾಂತವ್ವ ಲಮಾಣಿ, ಶಿವಕ್ಕ ತಳವಾರ, ಗಂಗವ್ವ ಲಮಾಣಿ, ಸುಸವ್ವ ಲಮಾಣಿ, ರೇಣವ್ವ ಲಮಾಣಿ ಇದ್ದರು. ಪಿಎಸ್‌ಐ ನಾಗರಾಜ ಗಡದ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಮನವಿ ಸ್ವೀಕರಿಸಿದರು.