ಸಾರಾಂಶ
-ಬಗರ್ ಹುಕುಂ ಸಾಗುವಳಿ ಪತ್ರ ವಿತರಣೆಗೆ ಆಗ್ರಹಿಸಿ ಸಿಪಿಐ ಕಾರ್ಯಕರ್ತರಿಂದ ಮನವಿ
-------ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಆಡಳಿತ ಸೌಧದ ಆವರಣದಲ್ಲಿ ಮನವಿ ಸಲ್ಲಿಸಿರುವ ಕಾರ್ಯಕರ್ತರು ಕಳೆದೊಂದು ದಶಕದಿಂದ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಸಾಗುವಳಿ ಪತ್ರ ಈವರೆಗೂ ವಿತರಿಸಿಲ್ಲ. ಹಕ್ಕು ಪತ್ರಗಳಿಗಾಗಿ ಹಲವು ಹೋರಾಟ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 493 ಅರ್ಜಿಗಳ ಸರ್ವೆ ಕಾರ್ಯ ಮುಗಿಸಿ ರೈತರಿಗೆ ಹಕ್ಕು ಪತ್ರ ಹಂಚುವ ಸಂದರ್ಭದಲ್ಲಿ ಕಾನೂನು ಸುತ್ತೋಲೆ ತೋರಿಸಿ ರೈತರನ್ನು ಒಕ್ಕಲಿಬ್ಬಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ರಾಂಪುರ, ದಡಗುರು, ವಡೇರಹಳ್ಳಿ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಸಕ್ರಮ ಕೋರಿ ಹಾಕಿದ ಫಾರಂ ನಂಬರ್ 57ರಲ್ಲಿ 177 ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ರೈತರನ್ನು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಿವೇಶನ ಸೌಲಭ್ಯಗಳಿಲ್ಲದೆ ಇಂದಿಗೂ ಪರಿತಪಿಸುತ್ತಿರುವ ಸಾವಿರಾರು ಫಲಾನುಭವಿಗಳಿಗೆ ಸಂಬಂಧಿಸಿದ ಗ್ರಾ.ಪಂ ನಿವೇಶನ ಕಲ್ಪಿಸುವಲ್ಲಿ ವಿಫಲವಾಗುತ್ತಿವೆ. ಕೆಲವು ಕಡೆ ನಿವೇಶನ ಕೊಡಲು ಜಾಮೀನು ಇದ್ದರೂ ರೈತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಈ ಕೂಡಲೇ ಎಲ್ಲ ನಿವೇಶನ ರೈತರಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ರೈತರಿಗೆ ಅಕ್ರಮ ಸಕ್ರಮದಡಿ ಭೂಮಿ ಮಂಜೂರಾತಿ ಮಾಡಿ ಸಾಗುವಳಿ ಪತ್ರ ವಿತರಿಸಬೇಕು. ರಾಮಪುರ, ಬಸಾಪುರ, ದೊಡ್ಡಗೂರು ಅರಣ್ಯ ಹಕ್ಕಿನಲ್ಲಿ ಭೂಮಿ ಮಂಜೂರು ಮಾಡಬೇಕು, ಕಟ್ಟಡ ಕಾರ್ಮಿಕರಿಗೆ ವಿತರಿಸುವ ಕಳಪೆ ಕಿಟ್ಟುಗಳನ್ನು ತಡೆದು ಉತ್ತಮ ಗುಣಮಟ್ಟದ ಕಿಟ್ಟುಗಳನ್ನು ನೀಡಬೇಕು ಎಂದು ಆಗ್ರಹಿಸಿ ತಹಸೀಲದ್ದಾರರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಿಐ ಕಾರ್ಯದರ್ಶಿ ಜಾಫರ್ ಷರೀಫ್ ಎಐಟಿಯುಸಿ ತಾಲೂಕ್ ಅಧ್ಯಕ್ಷ ಪೆನ್ನಯ್ಯ, ವೈ ಆಂಜನೇಯ, ಕೆ.ಬಿ ,ಪಾಪಣ್ಣ, ಮಾರಣ್ಣ, ಎಲ್ಲಪ್ಪ, ಎ ತಿಮ್ಮಣ್ಣ ,ಶಾಂತಮೂರ್ತಿ, ಭಾಗ್ಯಮ್ಮ, ಬೋರಣ್ಣ ಇದ್ದರು.
-------