ಮಾಧ್ಯಮ ಪಟ್ಟಿಗೆ ಸಮುದಾಯ ರೇಡಿಯೋ ಸೇರಿಸಲು ಮುಖ್ಯಮಂತ್ರಿಗೆ ಮನವಿ

| Published : Jul 09 2025, 12:19 AM IST

ಸಾರಾಂಶ

ಸರ್ಕಾರವು ಜಾಹೀರಾತು ನೀತಿ ಮರುಪರಿಶೀಲಿಸಿ ಸಮುದಾಯ ಬಾನುಲಿಗಳನ್ನು ಮಾಧ್ಯಮ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಮುದಾಯ ಬಾನುಲಿ ಕೇಂದ್ರಗಳ ಪ್ರತಿನಿಧಿಗಳ ತಂಡ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾನ್ಯತೆ ಮತ್ತು ವಯರ್‌ಲೆಸ್ ಆಪರೇಟಿಂಗ್ ಪರವಾನಗಿ ಹೊಂದಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಬಾನುಲಿ ಕೇಂದ್ರಗಳ ಪ್ರತಿನಿಧಿಗಳ ತಂಡ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಗೃಹಕಚೇರಿಯಲ್ಲಿ ಭೇಟಿಯಾಗಿ ಸಮುದಾಯ ಬಾನುಲಿಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿತು.ಸರ್ಕಾರವು ಜಾಹೀರಾತು ನೀತಿ ಮರುಪರಿಶೀಲಿಸಿ ಸಮುದಾಯ ಬಾನುಲಿಗಳನ್ನು ಮಾಧ್ಯಮ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಂಡು ನ್ಯಾಯ ಒದಗಿಸಿಕೊಡಬೇಕಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಇವರಿಗೂ ಈ ಸಂಬಂಧ ನಿರ್ದೇಶನ ನೀಡಬೇಕೆಂದು ತಂಡ ಒತ್ತಾಯಿಸಿತು.

ಈ ಸಂದರ್ಭ ಕರ್ನಾಟಕ ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್ ಅಧ್ಯಕ್ಷೆ ಡಾ.ರಶ್ಮಿ‌ಅಮ್ಮೆಂಬಳ (ರೇಡಿಯೊ ಮಣಿಪಾಲ್) ಸಮುದಾಯ ಬಾನುಲಿಗಳ ಪ್ರಸ್ತುತ ಸವಾಲುಗಳು, ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗೆ ವಿವರಿಸಿದರು.ತಳಮಟ್ಟದ ಸಮುದಾಯಗಳ ಧ್ವನಿಯಾಗಿರುವ ಸಮುದಾಯ ಬಾನುಲಿ ಕೇಂದ್ರಗಳು ಕಲೆ, ಸಂಸ್ಕೃತಿ, ಭಾಷೆ ಸಂರಕ್ಷಿಸುವುದರ ಜೊತೆಗೆ ಶಿಕ್ಷಣ, ಕೃಷಿ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಾ ಜನ ಸಾಮಾನ್ಯರನ್ನು ಪರಿಣಾಮಕಾರಿಯಾಗಿ ಮುಟ್ಟುವಂತಾಗಿರುವುದನ್ನು ಗಮನಕ್ಕೆ ತಂದರು.ಸಮುದಾಯ ಬಾನುಲಿ ಕೇಂದ್ರಗಳು ಸರ್ಕಾರದ ನಿಯಮಾವಳಿಗೆ ಅನುಗುಣವಾಗಿ ಸೀಮಿತ ಪ್ರಸಾರ ವ್ಯಾಪ್ತಿ ಹೊಂದಿವೆ. ರಾಷ್ಟ್ರದ ಮೂಲ ಘಟಕವಾದ ಸಮುದಾಯದ ಅಭಿವೃದ್ಧಿ ಆಶಯ ಹೊಂದಿರುವ ಸಮುದಾಯ ಬಾನುಲಿ ಕೇಂದ್ರಗಳು ಇತರ ರಾಷ್ಟ್ರೀಯ ಮಾಧ್ಯಮಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದರಿಂದ ಇವುಗಳಿಗೆ ಸರ್ಕಾರದ ಉತ್ತೇಜನವೂ ಅಗತ್ಯವಿದೆ ಎಂದು ಗಮನ ಸೆಳೆದರು.

ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್ ದಕ್ಷಿಣ ವಲಯದ ಜಂಟಿ ನಿರ್ದೇಶಕ ಶಿವಶಂಕರ್ ( ನಮ್ಮಧ್ವನಿ) ಮಾತನಾಡಿ, ದೇಶದಾದ್ಯಂತ ಸುಮಾರು 530ಕ್ಕಿಂತಲೂ ಹೆಚ್ಚು ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದರು.

ಮನವಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಕರ್ನಾಟಕ ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್‌ನ ಸದಸ್ಯರಾದ ನಿಂಗರಾಜು (ನಮ್ಮಧ್ವನಿ), ವಿ.ಕೆ. ಕಡಬ ( ರೇಡಿಯೊ ನಿನಾದ), ಜ್ಯೋತಿ ಸಾಲಿಗ್ರಾಮ (ರೇಡಿಯೊ ಕುಂದಾಪುರ), ರೋಶನ್ (ರೇಡಿಯೊ ಸಾರಂಗ್) ಈ ಸಂದರ್ಭ ಉಪಸ್ಥಿತರಿದ್ದರು. ಕೆಪಿಸಿಸಿ ಕಾರ್ಯದರ್ಶಿ ಲಾವಣ್ಯ ಬಳ್ಳಾಲ್ ಸಹಕರಿಸಿದರು.