ಚಿಕ್ಕಮಗಳೂರುಗಿರಿಶ್ರೇಣಿ ಪ್ರವೇಶಕ್ಕೆ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗಿರಿಶ್ರೇಣಿ ಪ್ರವೇಶಕ್ಕೆ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಪ್ರೀ ವೆಡ್ಡಿಂಗ್ ಶೂಟ್ ಮಾಡಲು ಸ್ಥಳೀಯ ಗಿರಿಶ್ರೇಣಿ ದೇಶದಲ್ಲೇ ಪ್ರಖ್ಯಾತಿಯಾಗಿದ್ದು ಇಲ್ಲಿಗೆ ಹೋಗಲು ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ಸಿಗದೆ ನಿರಾಸೆಯಿಂದ ವಾಪಾಸ್‌ ಆಗಬೇಕಾಗಿದೆ. ಇದರಿಂದ ಛಾಯಾಗ್ರಾಹಕರ ವೃತ್ತಿ ಬದುಕಿಗೆ ತೊಂದರೆಯಾಗುತ್ತಿದೆ.

ಸ್ಥಳೀಯ ಛಾಯಾಗ್ರಾಹಕರಿಗೆ ಹಾಗೂ ಸಂಘದ ಗುರುತಿನ ಚೀಟಿ ಪಡೆದ ಸದಸ್ಯರಿಗೆ ಆನ್‌ಲೈನ್ ಎಂಟ್ರಿ ನೋಡದೆ ನಮ್ಮ ಗುರುತಿನ ಚೀಟಿಯನ್ನೇ ಆಧರಿಸಿ ಗಿರಿಭಾಗದ ಪ್ರಕೃತಿ ಸೌಂದರ್ಯವನ್ನು ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಚಿತ್ರೀಕರಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ವೃತ್ತಿ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಅಗತ್ಯ ಸೌಲಭ್ಯ ಮತ್ತು ಸಹಕಾರ ನೀಡ ಬೇಕು. ಕಳೆದ ಕೆಲಸವಿಲ್ಲದೆ ತಮ್ಮ ಕುಟುಂಬ ನಿರ್ವಹಣೆ ಕಷ್ಟಸಾಧ್ಯ. ಅತಿ ಕಡಿಮೆ ಮದುವೆ ಶುಭ-ಸಮಾರಂಭಗಳು ಲಭ್ಯ ವಾಗಿರುತ್ತವೆ. ಜತೆಗೆ ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಜಿಲ್ಲಾಧ್ಯಂತ ಎಲ್ಲಾ ಸಮು ದಾಯ ಭವನ ಮತ್ತು ಮದುವೆ ಛತ್ರಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವಂತೆ ಆಗ್ರಹಿಸಿದರು.

ಕಾರಣ ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಬೆಲೆಬಾಳುವ ಕ್ಯಾಮರಾಗಳು ಕಳವಾಗುತ್ತಿವೆ. ಈ ಪ್ರಕರಣಗಳನ್ನು ತಡೆಯುವ ಸಲುವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ವೃತ್ತಿಬಾಂಧವರಿಗೆ ನೆರವಾಗ ಬೇಕೆಂದು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಿವು, ಜಿಲ್ಲಾ ಕಾರ್ಯದರ್ಶಿ ರೇಣುಕಪ್ಪ, ತಾಲೂಕು ಕಾರ್ಯದರ್ಶಿ ಲಕ್ಷ್ಮಿಕಾಂತ, ಖಜಾಂಚಿ ರುದ್ರೇಶ್, ಕಾರ್ಗಿಲ್ ಸೋಮಶೇಖರ್, ಸುರೇಶ್, ಹರೀಶ್, ರಮೇಶ್, ಸಂತೋಷ್, ಲೋಹಿತ್, ಅನಿಲ್ ಉಪಸ್ಥಿತರಿದ್ದರು.ಫೋಟೋ

ಗಿರಿಶ್ರೇಣಿಯಲ್ಲಿ ಛಾಯಾಚಿತ್ರಕ್ಕೆ ಸ್ಥಳೀಯ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ವರಿಷ್ಠಾಧಿಕಾರಿಗೆ ಶನಿವಾರ ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.