ಆಲ್ದೂರು ಒಕ್ಕಲಿಗರ ಸಂಘಕ್ಕೆ ಜಾಗ ನೀಡಲು ಜಿಲ್ಲಾಡಳಿತಕ್ಕೆ ಮನವಿ

| Published : Dec 10 2024, 12:31 AM IST

ಆಲ್ದೂರು ಒಕ್ಕಲಿಗರ ಸಂಘಕ್ಕೆ ಜಾಗ ನೀಡಲು ಜಿಲ್ಲಾಡಳಿತಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಆಲ್ದೂರಿನ ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕವಾಗಿ 3 ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್‌ ಹೇಳಿದ್ದಾರೆ.

ಜಿಲ್ಲಾಧಿಕಾರಿಗೆ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್‌ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಲ್ದೂರಿನ ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕವಾಗಿ 3 ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್‌ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲ್ದೂರಿನಲ್ಲಿ ಒಕ್ಕಲಿಗರ ಸಂಘಕ್ಕೆ ಜಾಗ ನಿಗದಿಪಡಿಸಲಾಗಿತ್ತು. ಆ ಜಾಗ ಸ್ಮಶಾನಕ್ಕೆ ಯೋಗ್ಯವಲ್ಲ ಎಂದು ಕಳೆದ 20 ವರ್ಷಗಳ ಹಿಂದೆಯೇ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ವರದಿ ನೀಡಿದ್ದರಿಂದ ಗ್ರಾಮ ಪಂಚಾಯ್ತಿಯಲ್ಲಿ ಒಕ್ಕಲಿಗರ ಸಂಘಕ್ಕೆ ಮೀಸಲಿಡಬೇಕೆಂಬ ನಿರ್ಣಯ ಮಾಡಿದ್ದರು. ಸುಮಾರು ₹10 ಲಕ್ಷ ವೆಚ್ಚ ಮಾಡಿ ಈ ಭೂಮಿಯನ್ನು ಸುಂದರ ತಾಣ ವನ್ನಾಗಿ ಮಾಡಲಾಗಿತ್ತು. ಆದರೆ, ದಾಖಲೆಯಲ್ಲಿ ಈ ಜಾಗ ಸ್ಮಶಾನ ಎಂದೇ ಇರುವುದರಿಂದ ಕೆಲವು ಸಂಘಟನೆಗಳು ಪ್ರಚೋದನೆ ನೀಡಿ ಶವ ಸಂಸ್ಕಾರಕ್ಕೆ ಮುಂದಾಗಿದ್ದರು ಎಂದು ಹೇಳಿದರು.

ಈ ಜಾಗದ ವಿವಾದ ನ್ಯಾಯಾಲಯದಲ್ಲಿದೆ. ಹಾಗಿದ್ದರೂ ಕೂಡ ಪೊಲೀಸರ ಉಪಸ್ಥಿತಿಯಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿರು ವುದು ಖಂಡನೀಯ. ಇದರಿಂದಾಗಿ ಸ್ಥಳೀಯ ಒಕ್ಕಲಿಗರ ಮನಸ್ಸಿಗೆ ನೋವುಂಟಾಗಿದೆ ಎಂದರು.

ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್ ಜೊತೆ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಂಡು ಸಾರ್ವಜನಿಕ ಹಿಂದೂ ಸ್ಮಶಾನ ಭೂಮಿಯಾಗಿರುವುದರಿಂದ ಆಲ್ದೂರು ಗ್ರಾಮ ಪಂಚಾಯಿತಿ ಯಿಂದ ಅಭಿವೃದ್ಧಿ ಪಡಿಸುವ ಜೊತೆಗೆ ಒಕ್ಕಲಿಗರ ಸಂಘದ ಚಟುವಟಿಕೆಗೆ ಪ್ರತ್ಯೇಕ 3 ಎಕರೆ ಜಾಗ ಮೀಸಲಿಡಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮದಲ್ಲಿ ಸಾಮರಸ್ಯ ಹಾಳು ಮಾಡಲು ಕೆಲವು ಸಂಘಟನೆಗಳು ಪಿತೂರಿ ನಡೆಸಿರುವುದು ಬೆಳಕಿಗೆ ಬಂದಿದ್ದು ಇದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದರು.ಮುಖಂಡ ಕವೀಶ್ ಮಾತನಾಡಿ, ವಿವಾದಿತ ಭೂಮಿಯನ್ನು ಸರ್ವೆ ಮಾಡಿ ಸ್ಮಶಾನ ಜಾಗ ಹೊರತುಪಡಿಸಿ ಉಳಿದ ಜಾಗ ವನ್ನು ಆಲ್ದೂರು ಒಕ್ಕಲಿಗರ ಸಂಘಕ್ಕೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು ಜೊತೆಗೆ ಬದಲಿ 3 ಎಕರೆ ಜಾಗ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ನಿರ್ದೇಶಕರಾದ ಕೆ.ಕೆ.ಮನುಕುಮಾರ್, ರಂಜನ್‌ ಅಜಿತ್‌ಕುಮಾರ್ ಹಾಜರಿದ್ದರು. 9 ಕೆಸಿಕೆಎಂ 4ಆಲ್ದೂರು ಒಕ್ಕಲಿಗರ ಸಂಘಕ್ಕೆ 3 ಎಕರೆ ಜಾಗ ನೀಡುವಂತೆ ಆಗ್ರಹಿಸಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್‌, ಕಾರ್ಯದರ್ಶಿ ಪ್ರಕಾಶ್‌, ಲಕ್ಷ್ಮಣ್‌ಗೌಡ, ರಂಜನ್‌ ಅಜಿತ್‌ ಕುಮಾರ್‌ ಇದ್ದರು.