ಕನ್ನಡಪ್ರಭ ವಾರ್ತೆ ಮೈಸೂರುಎಸ್‌ಐಆರ್‌ಮೂಲಕ ಭಾರತೀಯ ಮತದಾರರು ಯಾರು ಅಂತಹರವನ್ನು ಉಳಿಸುವ ಹಾಗೂ ಅನರ್ಹ ಮತದಾರರನ್ನು ತೆಗೆಸಿ ಹಾಕುವಂತ ಕೆಲಸ ಸಮರ್ಪಕವಾಗಿ ಆಗಬೇಕಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.ನಗರದ ಜಿಪಂ ಕಚೇರಿಯಲ್ಲಿ ಸೋಮವಾರ ಸಂಜೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಎಸ್‌ಐಆರ್‌ ನಲ್ಲಿ ಆಗುತ್ತಿರುವ ಗೊಂದಲ ಕುರಿತು ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮುಂದೆ ಇರುವುದು ಆ ಮತದಾರರು, ಈ ಮತದಾರರು ಎನ್ನುವ ಪ್ರಶ್ನೆಯಲ್ಲ. ಭಾರತೀಯ ಮತದಾರರನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರು.ನಗರದ ನರಸಿಂಹರಾಜ ಕ್ಷೇತ್ರದ 8 ವಾರ್ಡ್‌ ಗಳಲ್ಲಿ ಹಾಗೂ ಮೀನಾ ಬಜಾರ್ ನಲ್ಲಿ ನಮಗೆ ಬೂತ್ ಏಜೆಂಟ್‌ ಗಳೇ ಇಲ್ಲ, ಏಜೆಂಟ್ ಗಳನ್ನು ನಾವು ನೇಮಿಸಿದರೆ, ಅವರಿಗೆ ಬೆದರಿಕೆಗಳು ಬರುವುದನ್ನು ನಾವು ನೋಡಿದ್ದೇವೆ. ಹೀಗಾಗಿ, ನಾವು ಅಲ್ಲಿ ಏಜೆಂಟ್ ಗಳನ್ನು ನೇಮಕ ಮಾಡುವುದಕ್ಕೆ ಆಗಿಲ್ಲ. ಇದರಿಂದಾಗಿ ಎಸ್‌ಐಆರ್‌ ಪ್ರಕ್ರಿಯೆಯನ್ನು ನಾವು ಹೇಗೆ ಪರಿಶೀಲನೆ ಮಾಡಬೇಕು. ಆಕ್ಷೇಪಣೆಗಳನ್ನು ಹೇಗೆ ವ್ಯಕ್ತಪಡಿಸಬೇಕು. ಹೀಗಾಗಿ, ಜಿಲ್ಲಾಡಳಿತ ವತಿಯಿಂದ ನಮಗೆ ಸಹಾಯ ಮಾಡಿ, ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.ಬಿಎಲ್‌ಎಗಳ ನೇಮಕ ಮಾಡದೇ ಇರುವ ಕಡೆಯಲ್ಲಿ, ಒಂದೇ ಜಾಗದಲ್ಲಿ ಕುಳಿತು ಇಎಫ್‌ ನಮೂನೆಯನ್ನು ಸ್ವೀಕಾರ ಮಾಡುತ್ತಿರುವ ಕಡೆಗಳಿಗೆ ಪೊಲೀಸ್‌ ರಕ್ಷಣೆಯಲ್ಲಿ ಬಿಎಲ್‌ಎ ಗಳನ್ನು ಕರೆದುಕೊಂಡು ಹೋಗಿ ವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಕಾನೂನು ಘಟಕಗಳು ಇವೆ. ಅವುಗಳಲ್ಲೂ ಇದರ ಬಗ್ಗೆ ಅಭಿಪ್ರಾಯಗಳನ್ನು ಕೇಳಲಾಗಿದೆ ಎಂದರು.ಸೂಕ್ಷ್ಮವಾದ ವಾರ್ಡ್‌ ಗಳಲ್ಲಿ ಎಸ್‌ಐಆರ್‌ ವಿಚಾರವಾಗಿ ಸೂಕ್ತವಾದಂತಹ ಕ್ರಮ ತಗೆದುಕೊಳ್ಳಬೇಕು. ನೀವು ಹೋಗುವ ಸ್ಥಳದಲ್ಲಿ, ಸರಿಯಾಗಿ ನಡೆಯುತ್ತದೆ ಎಂದು ಯಾವ ರೀತಿ ಭಾವಿಸುತ್ತೀರಾ. ಆದ್ದರಿಂದ ನಮಗೆ ಈ ವಿಚಾರವಾಗಿ ವಿಶ್ವಾಸ ಇಲ್ಲ. ಆದ್ದರಿಂದ ನಾವು ಯಾರನ್ನು ಬಿಎಲ್‌ಎ ಯಾಗಿ ನೇಮಕ ಮಾಡುತ್ತೇವೆ, ಅವರಿಗೆ ರಕ್ಷಣೆ ನೀಡಿ, ಅವರು ಕೂಡ ಮನೆ-ಮನೆ ಬಾಗಿಲ ಬಳಿ ಹೋಗುತ್ತಾರೆ. ಇದರಿಂದ ನಮಗೂ ಒಂದು ಕಲ್ಪನೆ ಬರುತ್ತೆ. ಎಲ್ಲೆಲ್ಲಿ ಆಕ್ಷೇಪಗಳು ಬರುತ್ತವೆ ಅವುಗಳನ್ನು ಹೇಳಬಹುದು ಎಂದು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.ಇದು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತಹ ಪ್ರಕ್ರಿಯೆಯಾಗಿದೆ. ಇದು ಹೋರಾಟ ಅಲ್ಲ. ನಾವು ಎಲ್ಲಾ ಕಡೆಯಲ್ಲೂ ಅಕ್ರಮಣಕಾರಿ ಅಥವಾ ಮೃದುವಾಗಿ ಹೋಗುವಂತಹ ಪ್ರಕ್ರಿಯೆ ಅಲ್ಲ. ನಮಗೆ ಸುಮಾರು ಮೂರು ದಶಕಗಳಿಂದ ಯಾವುದೇ ರೀತಿ ಒಂದು ಬೂತ್ ಏಜೆಂಟ್‌ ಹಾಗೂ ಇತ್ಯಾದಿ ಯಾವುದನ್ನೂ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ಅಂತಹ ಬೂತ್ ಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆಗುತ್ತಾ ಇರುವ ಸಂದರ್ಭದಲ್ಲಿ, ನಮಗೆ ಪರಿಶೀಲನೆ ಮಾಡುವ ಹಕ್ಕಿದೆ ಎಂದು ಅವರು ಹೇಳಿದರು.ಶಾಸಕರಾದ ಟಿ.ಎಸ್‌. ಶ್ರೀವತ್ಸ, ಆರ್‌. ರಘು, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್‌. ನಾಗೇಂದ್ರ, ಮಾಜಿ ಮೇಯರ್‌ ಗಳಾದ ಶಿವಕುಮಾರ್‌, ಸಂದೇಶ್‌ ಸ್ವಾಮಿ, ಮುಖಂಡರಾದ ಫಣೀಶ್, ಅನಿಲ್ ಥಾಮಸ್, ಮೋಹನ್, ವಸಂತಕುಮಾರ್, ಗಿರಿಧರ್ ಮೊದಲಾದವರು ಇದ್ದರು.----ಬಾಕ್ಸ್..ನಿಯಮ ಪ್ರಕಾರ ಕ್ರಮ- ಡಿಸಿಇದಕ್ಕೂ ಮುನ್ನ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು, ನಿಯಮ ಪ್ರಕಾರ, ಬಿಎಲ್ಒಗಳು ಮನೆ ಮನೆಗೆ ಹೋಗಿ ಫಾರ್ಮ್ ಗಳನ್ನು ಹಂಚಬೇಕು. ಎಆರ್ ಒ, ಬಿಆರ್.ಒ ಎಲ್ಲರಿಗೂ ಇದೇ ರೀತಿಯ ನಿರ್ದೇಶನ ಇದೆ. ಮನೆ-ಮನೆಗೆ ತೆರಳುವುದಿಲ್ಲ ಎನ್ನುವುದು ಗೊತ್ತಾದರೆ ಸಂಬಂಧಪಟ್ಟ ಬಿ.ಎಲ್.ಒ ಸೂಪರ್‌ ವೈಸರ್ ಅಥವಾ ಬಿ.ಎಲ್.ಓ ಗಳಿಗೆ ನೋಟೀಸ್ ಕೊಟ್ಟು ವಿಚಾರಣೆ ಮಾಡಲಾಗುತ್ತದೆ. ಒಂದು ವೇಳೆ ಚುನಾವಣಾ ಆಯೋಗದ ನಿಯಮ ಮೀರಿ ಕೆಲಸ ಮಾಡುತ್ತಿದ್ದರೆ ಅಂತಹ ಬಿ.ಎಲ್.ಓ ಗಳ ಮೇಲೆ ಕ್ರಮ ತಗೊಳ್ಳುತ್ತೇವೆ ಎಂದರು.