ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ

| Published : Aug 16 2025, 02:01 AM IST

ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಮಲೆನಾಡಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಅಧ್ಯಕ್ಷ ಎಂ.ಎನ್.ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಅಧ್ಯಕ್ಷ ಎಂ.ಎನ್.ನಾಗೇಶ್ ನೇತೃತ್ವದಲ್ಲಿ ಮನವಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಲೆನಾಡಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಅಧ್ಯಕ್ಷ ಎಂ.ಎನ್.ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಮನವಿ ಕುರಿತು ಮಾಹಿತಿ ನೀಡಿದ ಎಂ.ಎನ್.ನಾಗೇಶ್, ಮಲೆನಾಡು ಭಾಗದಲ್ಲಿ ಇಂದು ಕಾಡು ಪ್ರಾಣಿಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಲೆನಾಡಿನಾದ್ಯಂತ ಆನೆಗಳ ಓಡಾಟ ಹೆಚ್ಚಾಗಿದೆ. ಪ್ರಾಣ ಹಾನಿ ಆದ ಸಂದರ್ಭದಲ್ಲಿ ಸರ್ಕಾರ ಪುಂಡಾನೆ ಎನ್ನುವ ನಿರ್ಧಾರಕ್ಕೆ ಬರುತ್ತಿದೆ. ಆದರೆ ಇಂದು ರೈತರು ಹಾಗೂ ಕಾರ್ಮಿಕರು ಕೃಷಿ ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಹಲವು ತೋಟಗಳು ಕೆಲಸ ನಿರ್ವಹಿಸಲು ಸಾಧ್ಯವಾಗದೆ ಪಾಳು ಬಿಡುವ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

ಭದ್ರಾ ಅಭಯಾರಣ್ಯದ ಅಂಚಿಗೆ ೧೦ ಅಡಿ ಎತ್ತರದ 3 ಸಾಲುಗಳ ಎತ್ತರದ ಬೇಲಿ ಮಾಡಿ ಗ್ರಾಮಗಳಲ್ಲಿ ಇರುವ ಆನೆ ಸ್ಥಳಾಂತರ ಮಾಡಬೇಕು. ಸರ್ಕಾರ ಯೋಜಿಸಿರುವ ಆನೆ ಬಿಡಾರ ಮತ್ತು ವಿಹಾರ ಧಾಮ ಎರಡೂ ಕೂಡ ಇಲ್ಲಿನ ವಾತಾವರಣಕ್ಕೆ ಪೂರಕವಲ್ಲದೇ ಇರುವುದರಿಂದ ಪ್ರಸ್ತಾಪಿತ ಯೋಜನೆ ಕೈಬಿಡಬೇಕು. ಶೃಂಗೇರಿ ಕ್ಷೇತ್ರದ ಮೂರೂ ತಾಲೂಕುಗಳು ಸೇರಿದಂತೆ ಖಾಂಡ್ಯ ಹೋಬಳಿಯಲ್ಲಿ ಆನೆ ಕಾರ್ಯಪಡೆ (ಇಟಿಎಫ್) ತಂಡ ರಚಿಸಿ ಈ ತಂಡಗಳು ತಾಲೂಕು ಕೇಂದ್ರಗಳಲ್ಲಿ ಇರುವಂತೆ ಕ್ರಮಕೈಗೊಳ್ಳಬೇಕು. ಸಿಬ್ಬಂದಿಗೆ ಸೂಕ್ತ ಉಪಕರಣ ನೀಡಬೇಕು ಎಂದು ಒತ್ತಾಯಿಸಿದರು.

ಕಾಡುಪ್ರಾಣಿಗಳ ಹಾವಳಿ ತಡೆಯಲು ಗಾಳಿಯಲ್ಲಿ ಗುಂಡು ಹಾರಿಸಲು ರೈತರಿಗೆ ನೀಡುತ್ತಿರುವ ಗನ್ ಲೈಸೆನ್ಸ್ ಸರಳೀಕರಣ ಮಾಡಬೇಕು. ಸೆಕ್ಷನ್ 4 ಮತ್ತು 17ರ ಗೊಂದಲ ಬಗೆಹರಿಸಲು ಗ್ರಾಪಂಗಳಿಗೆ ಇನ್ನೂ ಒಂದು ವರ್ಷ ಕಾಲಾವಕಾಶ ನೀಡಬೇಕು. ಹೆಚ್ಚು ಒತ್ತುವರಿಯಾಗಿರುವ ಕಡೆ ಭೂಮಿ ತೆರವು ಮಾಡಬೇಕು ಮತ್ತು ಇಂದಿನ ಅಗತ್ಯಕ್ಕೆ ತಕ್ಕಂತೆ ಕನಿಷ್ಠ ಬದುಕಲು ಬೇಕಾಗುವಷ್ಟು ಸಾಗುವಳಿ ಭೂಮಿಯನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂದು ಹೇಳಿದರು.

ಕಾಡುಪ್ರಾಣಿಗಳಿಗಿಂತ ಮಾನವ ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜನಸ್ನೇಹಿಯಾಗುವಂತೆ ಮಾಡಬೇಕು. ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು, ರೈತರು, ಕಾರ್ಮಿಕರ ಸಮಾಲೋಚನಾ ಸಭೆ ನಡೆಸಬೇಕು.ಅರಣ್ಯ ಸಚಿವರೊಂದಿಗೆ ಮಲೆನಾಡಿಗರ ಸಭೆ ಕೂಡಲೇ ನಡೆಯಬೇಕಿದ್ದು, ಈ ಸಭೆ ನಡಾವಳಿ ಆಗುವಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ. ಕಳೆದ 5 ವರ್ಷಗಳಿಂದ ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿ ರೈತರ ನಡುವೆ ಯಾವುದೇ ಸಂವಹನ ನಡೆಸಿಲ್ಲ. ಈ ಕಾರ್ಯ ಕೂಡಲೇ ಆಗಬೇಕು ಎಂಧು ಆಗ್ರಹಿಸಿದರು.ಭದ್ರಾ ಹಿನ್ನೀರಿನಿಂದ ಸಂತ್ರಸ್ತರಾದವರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದನ್ನೂ ಕೂಡಲೇ ಬಗೆಹರಿಸಬೇಕು. ಸೊಪ್ಪಿನ ಬೆಟ್ಟ, ಕುಮ್ಕಿ, ಕಾಫಿ ಕರಾಬು ಪ್ರದೇಶವನ್ನು ಅರಣ್ಯ ಇಲಾಖೆ ನಮ್ಮದು ಎನ್ನುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿರುವ ಜನಸಂಖ್ಯೆಗೆ ಆಧಾರಿತವಾಗಿ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಕ್ರಮವಾಗಬೇಕು.ಇಂತಹ ಹಲವು ಸಮಸ್ಯೆಗಳನ್ನು ಚರ್ಚಿಸಿ ಮಲೆನಾಡಿಗೆ ಸೂಕ್ತವಾಗುವ ಕಾನೂನು ರೂಪಿಸುವ ನಿಟ್ಟಿನಲ್ಲಿ ರೈತರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಬೇಕು. ಮಲೆನಾಡಿಗರಿಗೆ ಅರಣ್ಯವೂ ಬೇಕು, ಜೀವ ವೈವಿದ್ಯತೆಯೂ ಬೇಕು. ಮಲೆನಾಡು ಉಳಿಯಬೇಕು ಎಂಬುದು ನಮ್ಮ ಆಶಯ. ಇಲ್ಲಿನ ಜನರನ್ನೂ ಕೂಡ ಜೀವವೈವಿದ್ಯದ ಒಂದು ಭಾಗ ಎಂದು ಪರಿಗಣಿಸಿ ನ್ಯಾಯ ದೊರಕಿಸುವ ಕೆಲಸವಾಗಲಿ ಎಂದು ಮನವಿಯಲ್ಲಿ ಕೋರಲಾಗಿದೆ. ಜಿಲ್ಲಾಧಿಕಾರಿ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಮಿತಿ ಉಪಾಧ್ಯಕ್ಷ ನವೀನ್ ಕರಗಣೆ, ಕಾರ್ಯದರ್ಶಿ ಅಭಿ ಹೊಸಳ್ಳಿ, ಪ್ರಮುಖರಾದ ರತ್ನಾಕರ ಗಡಿಗೇಶ್ವರ, ಚಂದ್ರಶೇಖರ್ ರೈ, ನವೀನ್ ಹೆನ್ನಂಗಿ, ಅಶ್ವಿನ್ ಶೃಂಗೇರಿ, ಪ್ರವೀಶ್ ಹೊನ್ನಳಿ ಮತ್ತಿತರರು ಹಾಜರಿದ್ದರು.೧೪ಬಿಹೆಚ್‌ಆರ್ ೧:

ಮಲೆನಾಡಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಅಧ್ಯಕ್ಷ ಎಂ.ಎನ್.ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ನವೀನ್ ಕರಗಣೆ, ಅಭಿ ಹೊಸಳ್ಳಿ, ರತ್ನಾಕರ ಗಡಿಗೇಶ್ವರ, ಚಂದ್ರಶೇಖರ್ ರೈ ಹಾಜರಿದ್ದರು.