ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಪೌರಾಯುಕ್ತರಿಗೆ ಮನವಿ

| Published : May 28 2024, 01:12 AM IST

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಪೌರಾಯುಕ್ತರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರು ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಪೌರಾಯುಕ್ತ ಮಂಜುನಾಥ ಗುಂಡೂರುಗೆ ಸೋಮವಾರ ಮನವಿಪತ್ರ ಸಲ್ಲಿಸಿದರು

ಕನ್ನಡಪ್ರಭ ವಾರ್ತೆ ಸಿಂಧನೂರು

ಮೂರು ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಕುಸಿದ ಪರಿಣಾಮ ಸಿಂಧನೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರುಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

ಈಗಾಗಲೇ ನಗರದ ವಿವಿಧ ವಾರ್ಡ್‌ಗಳಿಗೆ 10 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಭರವಸೆ ನೀಡಿದ್ದೀರಿ, ಆದರೆ ಹನ್ನೊಂದು ದಿನ ಕಳೆದರೂ ನೀರು ಪೂರೈಕೆಯಾಗಿಲ್ಲ ಎಂದು ಬಡಿಬೇಸ್, ಖದರಿಯಾ ಕಾಲೋನಿ, ಗಂಗಾನಗರದ ನಿವಾಸಿಗಳು ತಿಳಿಸಿದ್ದಾರೆ. ಜೂನ್, ಜುಲೈ ತಿಂಗಳಿಗೆ ಆಗುವಷ್ಟು ನೀರು ಕೆರೆಯಿಂದ ಲಭ್ಯವಾಗುತ್ತದೆ ಎಂದು ನಗರಸಭೆಯಿಂದಲೇ ಹೇಳಲಾಗಿತ್ತು. ಆದರೆ ನೀರಿನ ಸಂಕಷ್ಟ ಎದುರಾಗಿದೆ. ಹೀಗಾದರೆ ಪರಿಸ್ಥಿತಿ ನಿರ್ವಹಣೆಗೆ ಹೇಗೆ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಚಂದ್ರಶೇಖರ ಗೊರಬಾಳ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೀರಿನ ಅಭಾವದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಗರಸಭೆ ತುರ್ತು ಕ್ರಮಕ್ಕೆ ಮುಂದಾಗಬೇಕು. ಇಲ್ಲದೇ ಹೋದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಕೂಲಿ ಕಾರ್ಮಿಕರು, ಬಡ ವರ್ಗದವರು ಸೇರಿ ಮಧ್ಯಮ ವರ್ಗದ ಕುಟುಂಬಗಳಿದ್ದು, ಅವರು ಹೆಚ್ಚು ನೀರು ಸಂಗ್ರಹ ಮಾಡಿಕೊಳ್ಳಲು ಸಮಸ್ಯೆ ಇದೆ. ಹಾಗಾಗಿ ಅಂತಹ ವಾರ್ಡ್‌ ಪ್ರದೇಶಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಸಿಸ್ಟನ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮುಖಂಡರಾದ ಡಿ.ಎಚ್.ಕಂಬಳಿ, ವೀರಭದ್ರಗೌಡ ಅಮರಾಪುರ, ಕರೇಗೌಡ ಪಿ.ಕುರುಕುಂದಿ, ಎಸ್.ಎ.ಖಾದರ್ ಸುಭಾನಿ, ಹುಸೇನ್ಸಾಬ್, ಬಸವರಾಜ ಬಾದರ್ಲಿ, ಎಸ್.ದೇವೇಂದ್ರಗೌಡ, ನಾಗರಾಜ್ ಪೂಜಾರ್, ಬಸವರಾಜ ಬಾದರ್ಲಿ, ಬಸವರಾಜ ಕೊಂಡೆ, ಡಾ.ವಾಸೀಮ್, ಬಸವರಾಜ ಹಸಮಕಲ್, ಮಲ್ಲಿಕಾರ್ಜುನ ಕುರುಗೋಡು ಇದ್ದರು.