ಸಾರಾಂಶ
ಶಿರಸಿ: ಸ್ವಾತಂತ್ರ್ಯದ ನಂತರ ಮುಸ್ಲಿಮರು ಪಾಕಿಸ್ತಾನ ಎಂದು ಒಡೆದುಕೊಂಡು ಹೋದರು. ದೇಶದಲ್ಲಿ ಉಳಿದ ಮುಸ್ಲಿಂ ಸಮುದಾಯದ ಜನರನ್ನು ದೇಶಭಕ್ತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತಂದು ಬೆಳೆಸಬೇಕಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ನಗರದ ದೈವಜ್ಞ ಕಲ್ಯಾಣಮಂಟಪದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ದೈವಜ್ಞ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ನಾವೆಲ್ಲ ಭೇದವಿಲ್ಲದೇ ಅಣ್ಣ- ತಮ್ಮಂದಿರಂತೆ ಬದುಕಬೇಕಿತ್ತು. ಅಧಿಕಾರಕ್ಕಾಗಿ ಮುಸ್ಲಿಂ ತುಷ್ಟೀಕರಣ ಮಾಡಿ ಅವರನ್ನೇ ಪ್ರತ್ಯೇಕವಾಗಿ ಇಡುವ ಪ್ರಯತ್ನ ಮಾಡಿದರು.
ಇತ್ತೀಚೆಗೆ ವಕ್ಫ್ ಆಸ್ತಿ ವಿಚಾರದಲ್ಲಿ ದೊಡ್ಡ ಬೊಬ್ಬೆ ನಡೆಯಿತು. ರೈಲ್ವೆ ಮತ್ತು ಸೈನ್ಯ ಬಿಟ್ಟರೆ ವಕ್ಫ್ ದೇಶದಲ್ಲೇ ಮೂರನೇ ಅತಿ ದೊಡ್ಡ ಆಸ್ತಿ ಹೊಂದಿದೆ. ೯ ಲಕ್ಷ ಎಕರೆ ಆಸ್ತಿ ಇರುವುದು ಮುಸ್ಲಿಂ ಸಮುದಾಯದ ವಕ್ಫ್ ಹತ್ತಿರ. ಆದರೆ ಅದನ್ನು ದಾಖಲೀಕರಣ ಮಾಡಬೇಕು ಎಂದು ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಅದಕ್ಕೆ ಕಾಂಗ್ರೆಸ್ ವಿರೋಧಿಸಿತು. ಕಾಂಗ್ರೆಸ್‌ಗೆ ಹಿಂದೂ ಧರ್ಮ ನಗಣ್ಯ ಎಂದು ಪರಿಗಣಿಸಿ ಒಡೆದು ಆಳುವ ನೀತಿಯನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಸಿಎಂ ವಿರುದ್ಧ ರಾಜ್ಯಪಾಲರು ಕೇವಲ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಯನ್ನೇ ಮಾಡಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಡಿ.ಕೆ. ಶಿವಕುಮಾರ್ ತನ್ನನ್ನೂ ತನಿಖೆ ಮಾಡಬಾರದು ಎನ್ನುತ್ತಾರೆ. ಅದೇ ರೀತಿ ದರ್ಶನ್‌ಗೂ ಅಭಿಮಾನಿ ಬಳಗವಿದೆ. ಅವರೂ ತನ್ನನ್ನು ಬಿಟ್ಟು ಬಿಡಿ ಎನ್ನಬಹುದು ಎಂದರು. ಜೈಲುಗಳಲ್ಲಿ ಡ್ರಗ್ಸ್ ಸೇರಿ ಮಾದಕ ಪದಾರ್ಥಗಳ ಸರಬರಾಜು ಮಾಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ನಾನು ಗೃಹ ಸಚಿವನಾಗಿದ್ದ ಇಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಆ ಸಂದರ್ಭದಲ್ಲಿ ಕೆಲ ಜೈಲುಗಳಲ್ಲಿ ದಾಳಿ ಮಾಡಿದಾಗ ಸಿಕ್ಕಿಬಿದ್ದರು. ಆಗ ಅನೇಕ ಅಧಿಕಾರಿಗಳನ್ನು ಅಮಾನತು ಮಾಡಿ, ಶಿಸ್ತಿನ ಕ್ರಮ ಕೈಗೊಳ್ಳಲಾಗಿತ್ತು.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಾಗ ಇಂತಹ ಘಟನೆಗಳು ಆಗದಂತೆ ತಡೆಯಲು ಇಡೀ ಜೈಲನ್ನು ಪರಿವರ್ತನೆ ಮಾಡುವ ಕೆಲಸ ಮಾಡಿದ್ದೆ. ₹೩೦ ಕೋಟಿ ವೆಚ್ಚದಲ್ಲಿ ಜೈಲುಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿತ್ತು ಎಂದರು. ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿ ದೇಶಪಾಂಡೆ ಒಬ್ಬರೇ ಅಲ್ಲ, ಬಹಳ ಜನರಿದ್ದಾರೆ. ಆದರೆ ಈ ಸರ್ಕಾರವೇ ಉಳಿಯುವುದಿಲ್ಲ. ಈಗಾಗಲೇ ಹಸಿದ ಹುಲಿಯಂತೆ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಿಂದೆ ನಮ್ಮ ಸರ್ಕಾರಕ್ಕೆ ಶೇ. ೪೦ ಪರ್ಸಂಟೇಜ್ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದರು. ಆದರೆ ಈಗ ಶೇ. ೧೦೦ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ಹೆಬ್ಬಾರ ಒಂದು ಕಾಲನ್ನು ಕಾಂಗ್ರೆಸ್‌ನಲ್ಲಿ ಇಟ್ಟಿದ್ದಾರೆ. ಅವರು ಬಿಜೆಪಿ ಅಡಿಯಲ್ಲಿ ಗೆದ್ದು ಈ ರೀತಿ ಮಾಡಬಾರದಿತ್ತು. ನಾಮಕಾವಸ್ತೆಯಲ್ಲಿ ಬಿಜೆಪಿಯಲ್ಲಿದ್ದಾರೆ. ಅವರ ಕ್ಷೇತ್ರದ ಜನರು ಉತ್ತರಿಸುತ್ತಾರೆ ಎಂದರು.ಸಂಕಟ ಬಂದಾಗ ವೆಂಕಟರಮಣ ಎನ್ನುವ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಒಂದು ಕಪ್ಪು ಚುಕ್ಕೆಯೂ ತನ್ನ ಬಟ್ಟೆಯ ಮೇಲೆ ಇಲ್ಲ ಎನ್ನುತ್ತಾ ಬೀಗುತ್ತಿದ್ದ ಮುನುಷ್ಯನ ಮುಖವಾಡ ಕಳಚಿದೆ. ಈಗ ಮಾಡಬಾರದನ್ನು ಮಾಡುತ್ತಾ ರಾಜ್ಯಪಾಲರನ್ನು ದೂರುತ್ತಿದ್ದಾರೆ.ಇವರು ಮಾಡಿದ ಕೃತ್ಯಕ್ಕೆ ಕ್ಷಮೆ ಕೇಳಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನ್ನ ಹಿಂದೆ ಮಂತ್ರಿಮಂಡಲ ಇದೆ. ತನ್ನ ಹಿಂದೆ ಶಾಸಕರಿದ್ದಾರೆ, ಬೆನ್ನ ಹಿಂದೆ ಹೈಕಮಾಂಡ್ ಎನ್ನುತ್ತಾ ಅಧಿಕಾರದಲ್ಲಿ ಮುಂದುವರಿದ್ದಾರೆ. ಅವರೆಲ್ಲ ಇದ್ದರೆ ಇವರಿಗೆ ಮಾತ್ರ ಕಾನೂನು ಬೇರೆ ಆಗುತ್ತದೆಯೇ. ಅವರೆಲ್ಲ ಇದ್ದಾಕ್ಷಣ ಇವರು ಮಾಡಿದ ಅಪರಾಧ ಮನ್ನಾ ಆಗುತ್ತಾ ಎಂದು ಮಾಜಿ ಗೃಹ ಸಚಿವ ಜ್ಞಾನೇಂದ್ರ ಪ್ರಶ್ನಿಸಿದರು.