ಉಪ್ಪಿನಂಗಡಿ: ನೇತ್ರಾವತಿ, ಕುಮಾರಧಾರಾ ಹರಿವು ಹೆಚ್ಚಳ

| Published : May 20 2024, 01:40 AM IST / Updated: May 20 2024, 12:27 PM IST

ಉಪ್ಪಿನಂಗಡಿ: ನೇತ್ರಾವತಿ, ಕುಮಾರಧಾರಾ ಹರಿವು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 24ರವರೆಗೆ ಕರಾವಳಿಯ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೇ 21,22ರಂದು ಉತ್ತಮ ಮಳೆಯಾಗುವ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

 ಉಪ್ಪಿನಂಗಡಿ :  ಕಳೆದೆರಡು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿರುವ ಕಾರಣಕ್ಕೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರಲ್ಲೂ ನೀರಿನ ಹರಿವು ಹೆಚ್ಚಿದ್ದು, ಮಳೆ ನೀರಿನ ಕಾರಣಕ್ಕೆ ಕೆಂಬಣ್ಣದಿಂದ ಕೂಡಿದ ನೀರಿನ ಹರಿಯುವಿಕೆ ಕಂಡು ಬಂದಿದೆ.ಕಳೆದ ಸೋಮವಾರ ಬಿಳಿಯೂರು ಅಣೆಕಟ್ಟಿನಿಂದ ಸಂಗ್ರಹಗೊಂಡಿದ್ದ ಎಲ್ಲ ಹಿನ್ನೀರನ್ನು ಮಂಗಳೂರಿನ ಕುಡಿಯುವ ನೀರು ಸರಬರಾಜುಗೊಳ್ಳುವ ತುಂಬೆ ಅಣೆಕಟ್ಟಿಗೆ ಹರಿಯಬಿಟ್ಟ ಬಳಿಕ ನದಿಯ ನೀರಿನ ಹರಿಯುವಿಕೆ ತೀರಾ ಸೊರಗಿತ್ತು. ಸುತ್ತಮುತ್ತ ಕೆಲವೆಡೆ ಮಳೆಯಾಗುತ್ತಿದ್ದರೂ ನದಿಯ ನೀರಿನ ಹರಿಯುವಿಕೆಯಲ್ಲಿ ಯಾವುದೇ ಪ್ರಗತಿ ಕಾಣಿಸಿರಲಿಲ್ಲ. ಆದರೆ ಭಾನುವಾರ ಮುಂಜಾನೆಯಿಂದಲೇ ನದಿಯಲ್ಲಿ ಮಣ್ಣು ಮಿಶ್ರಿತ ನೀರಿನ ಹರಿಯುವಿಕೆ ಕಾಣಿಸಿದ್ದು, ದಿನ ಪೂರ್ತಿ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿತ್ತು.

ಇತ್ತ ಸುಬ್ರಹ್ಮಣ್ಯ ಪರಿಸರದಲ್ಲಿಯೂ ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯದಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿಯೂ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಉಭಯ ನದಿಗಳು ಸಂಗಮಿಸುವ ಉಪ್ಪಿನಂಗಡಿಯ ಬಳಿಕ ನೇತ್ರಾವತಿ ನದಿಯಲ್ಲಿ ಸಹಜ ಜೀವ ಕಳೆ ಮೂಡತೊಡಗಿದೆ.

ವಿದೇಶಿ ಹಕ್ಕಿಗಳ ಕಲರವ: ಕಳೆದ ಸೋಮವಾರದಿಂದ ನದಿಯಲ್ಲಿ ಸಂಗ್ರಹವಾಗಿದ್ದ ಹಿನ್ನೀರು ಸಂಪೂರ್ಣ ಖಾಲಿಯಾದ ಬಳಿಕ ನದಿಯ ಒಡಲಿನಲ್ಲಿರುವ ಮೀನುಗಳನ್ನು ತಿನ್ನಲು ಹಕ್ಕಿಗಳ ಹಿಂಡು ನದಿಯಲ್ಲಿ ಕಂಡು ಬಂದಿದೆ. ಅದರಲ್ಲೂ ಮುಖ್ಯವಾಗಿ ವಿದೇಶಿ ತಳಿಯ ದೊಡ್ಡ ಗಾತ್ರದ ಕೊಕ್ಕರೆಗಳ ಹಿಂಡು ಯಥೇಚ್ಛವಾಗಿ ಕಾಣಿಸಲಾರಂಭಿಸಿದೆ. ಸ್ಥಳೀಯ ಸಣ್ಣ ಗಾತ್ರದ ಕೊಕ್ಕರೆಗಳು ವಿದೇಶಿ ತಳಿಯ ದೊಡ್ಡ ಗಾತ್ರದ ಕೊಕ್ಕರೆಗಳೊಂದಿಗೆ ಮೀನಿನ ಬೇಟೆಯಾಡುವ ದೃಶ್ಯ ಮನೋಹರವಾಗಿದೆ.

ದಕ್ಷಿಣ ಕನ್ನಡದ ಹಲವೆಡೆ ಮುಂದುವರಿದ ಮಳೆ

ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾನುವಾರ ಮಳೆಯಾಗಿದೆ. ಬೆಳಗ್ಗೆ ಹೊತ್ತು ಸುಳ್ಯ, ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಭಾಗದಲ್ಲಿ ಹನಿ ಮಳೆಯಾಗಿದೆ. ಮಂಗಳೂರಿನ ಹಲವಡೆ ಗಾಳಿ ಸಹಿತ ಮಳೆಯಾಗಿದೆ.

ಮಳೆ ಕಾರಣದಿಂದ ಮುಂಜಾನೆ ಜಿಲ್ಲೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಆದರೆ ಬಿಸಿಲೇರುತ್ತಿದ್ದಂತೆ ಮತ್ತೆ ಸೆಕೆ ಆವರಿಸಿತ್ತು. ಆದರೆ ಈ ಹಿಂದಿನ ಸೆಕೆಯ ವಾತಾವರಣ ಇರಲಿಲ್ಲ. ದಿನವಿಡಿ ಬಿಸಿಲು, ಮೋಡ ಕವಿದ ವಾತಾವರಣವಿತ್ತು.ಗಾಳಿ ಹೆಚ್ಚಾಗಿದ್ದುದರಿಂದ ಸಮುದ್ರವೂ ಸ್ವಲ್ಪ ಮಟ್ಟಿಗೆ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ. ಭಾನುವಾರ ಜಿಲ್ಲೆಯಲ್ಲಿ ಸರಾಸರಿ 30.2 ಡಿಗ್ರಿ ಸೆ. ಗರಿಷ್ಠ, 24.1 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇನ್ನೂ 3 ದಿನ ಮಳೆ ಸಾಧ್ಯತೆ:ದಕ್ಷಿಣ ಕನ್ನಡದಲ್ಲಿ ಮೇ 20ರಂದು ಕೂಡ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 24ರವರೆಗೆ ಕರಾವಳಿಯ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೇ 21,22ರಂದು ಉತ್ತಮ ಮಳೆಯಾಗುವ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.