ಹೈಕೋರ್ಟ್‌: ಭಿಕ್ಷುಕರ ಕೇಂದ್ರದಲ್ಲಿ ಮನೆ ನಿರ್ಮಾಣ ಅರ್ಜಿ ವಜಾ

| Published : Feb 13 2024, 01:45 AM IST / Updated: Feb 13 2024, 02:50 PM IST

Karnataka High Court
ಹೈಕೋರ್ಟ್‌: ಭಿಕ್ಷುಕರ ಕೇಂದ್ರದಲ್ಲಿ ಮನೆ ನಿರ್ಮಾಣ ಅರ್ಜಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಭಿಕ್ಷುಕರ ಪರಿಹಾರ ಕೇಂದ್ರದಲ್ಲಿ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಜಿಲ್ಲಾಧಿಕಾರಿಗಳ ಆದೇಶ ಸರಿ ಇದೆ ಎಂದು ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮಾಗಡಿ ರಸ್ತೆಯ ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಕೆಲ ಭಾಗವನ್ನು ಕೊಳಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ ನಿಗದಿಪಡಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಪರಿಹಾರ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಮೈಸೂರು ಮಹಾರಾಜರ ಕಾಲದಲ್ಲಿ 1941ರಲ್ಲಿ ಯಶವಂತಪುರ ಹೋಬಳಿಗೆ ಸೇರಿದ ಪ್ರದೇಶದಲ್ಲಿ 311 ಎಕರೆ ಭೂಮಿಯನ್ನು ಭಿಕ್ಷುಕರ ಪುನರ್ ವಸತಿಗಾಗಿ ಮಂಜೂರು ಮಾಡಲಾಗಿತ್ತು. 

ಆ ಪೈಕಿ 62 ಎಕರೆ ಜಾಗವನ್ನು ಭಿಕ್ಷುಕರ ಪುನರ್ ವಸತಿಗೆ ಮೀಸಲಿಟ್ಟು, ಉಳಿದ ಜಾಗವನ್ನು ಸುಮ್ಮನಹಳ್ಳಿ ಕ್ಷಯರೋಗ ರೋಗಿಗಳಿನ ಪುನರ್ ವಸತಿ ಕೇಂದ್ರಕ್ಕೆ ಗುತ್ತಿಗೆಯ ಮೇಲೆ ನೀಡಲಾಗಿತ್ತು. 

ಅದರಲ್ಲಿ 27 ಎಕರೆ ಜಾಗವನ್ನು ಕೊಳಗೇರಿ ನಿವಾಸಿಗಳಿಗೆ ಪುನರ್ ವಸತಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿತ್ತು. 

ಹಾಗಾಗಿ ಜಿಲ್ಲಾಧಿಕಾರಿ ಭೂಮಿಯನ್ನು ಕೊಳಗೇರಿ ನಿವಾಸಿಗಳ ಪುನರ್ ವಸತಿಗೆ ನಿಗದಿಪಡಿಸಿ ಹೊರಡಿಸಿರುವ ಆದೇಶ ಸರಿಯಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರ ಸಂಸ್ಥೆ ಅನಗತ್ಯವಾಗಿ ಏಳು ವರ್ಷಗಳ ಕಾಲ ಈ ವ್ಯಾಜ್ಯವನ್ನು ಜೀವಂತವಾಗಿಟ್ಟಿದೆ. 

ಇದರಿಂದ ಕೊಳಗೇರಿ ನಿವಾಸಿಗಳಿಗೆ ಪುನರ್ ವಸತಿ ಲಭ್ಯವಾಗಿಲ್ಲ. ರಾಜ್ಯ ಸರ್ಕಾರದ ಒಂದು ಅಂಗ ಇನ್ನೊಂದು ಅಂಗ ಸಂಸ್ಥೆಯ ಮೇಲೆ ಕಾನೂನು ಹೋರಾಟ ನಡೆಸುತ್ತಿದೆ. 

ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿದ್ದ ಕಾರಣ ಕೊಳಗೇರಿ ನಿವಾಸಿಗಳು ಹಲವು ವರ್ಷಗಳಿಂದ ವಸತಿ ಸೌಕರ್ಯವಿಲ್ಲದೆ ಬಳಲುವಂತಾಗಿದೆ. 

ಹಾಗಾಗಿ, ಸರ್ಕಾರ ಹಾಗೂ ಕೊಳಗೇರಿ ನಿರ್ಮೂಲನಾ ಮಂಡಳಿ ತಡ ಮಾಡದೆ ಶೀಘ್ರ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನ್ಯಾಯಪೀಠ ಸಲಹೆ ಮಾಡಿದೆ.