ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಿಯುಇಟಿ ಮೂಲಕ ಸ್ನಾತಕೋತ್ತರ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜನವರಿ 14ರವರೆಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಕಲಬುರಗಿ ಕೇಂದ್ರಿಯ ವಿವಿ ಹಿಂದಿ ವಿಭಾಗದ ಪ್ರಾಧ್ಯಾಪಕ ಪ್ರೊ.ಗಣೇಶ ಪವಾರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಿಯುಇಟಿ ಮೂಲಕ ಸ್ನಾತಕೋತ್ತರ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜನವರಿ 14ರವರೆಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಕಲಬುರಗಿ ಕೇಂದ್ರಿಯ ವಿವಿ ಹಿಂದಿ ವಿಭಾಗದ ಪ್ರಾಧ್ಯಾಪಕ ಪ್ರೊ.ಗಣೇಶ ಪವಾರ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಹಲವಾರು ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ. ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತ್ರ, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಪ್ರವಾಸೋದ್ಯಮ, ಪ್ರಯಾಣ ನಿರ್ವಹಣೆ, ಮನೋವಿಜ್ಞಾನ, ಭುಗೋಳಶಾಸ್ತ್ರ, ಭೂವಿಜ್ಞಾನ, ಗಣಿತ ಮೊದಲಾದ ಕೋರ್ಸ್‌ಗಳ ಪ್ರವೇಶ ಜೊತೆಗೆ ಎಂಟೆಕ್ ಪವರ್ ಆ್ಯಂಡ್ ಎನರ್ಜಿ ಸೋರ್ಸಸ್ ಇಂಜಿನಿಯರಿಂಗ್, ಆರ್‌ಎಫ್ ಮೈಕ್ರೋವೇವ್ ಇಂಜಿನಿಯರಿಂಗ್‌ನಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಎಂಪಿಎ, ಇನ್ಸಟ್ರುಮೆಂಟಲ್ ಸಂಗೀತದಲ್ಲಿ ಎಂಪಿಎ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ ಹೀಗೆ ಅನೇಕ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ.8ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ, ಕರ್ನಾಟಕದಾದ್ಯಂತ 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ ಎಂದರು. ಎಂ.ಟೆಕ್‌ನ ಶೇ.50ರಷ್ಟು ಸೀಟುಗಳನ್ನು ಸಿಯುಇಟಿ ಮೂಲಕ ಹಾಗೂ ಶೇ.50 ರಷ್ಟು ಸೀಟುಗಳನ್ನು ಗೇಟ್ ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದರು.ಹೆಲ್ಪ್ ಡೆಸ್ಕ್:
ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ತೊಂದರೆ ಎದುರಿಸಿದರೆ ಅದರ ನಿವಾರಣೆಗಾಗಿ ವಿಶೇಷ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ತೊಂದರೆ ಎದುರಿಸುವ ವಿದ್ಯಾರ್ಥಿಗಳು 011-40759000 ಅಥವಾ 011-69227700 ಸಂಪರ್ಕಿಸಬಹುದಾಗಿದೆ. ಅಲ್ಲಿ ತಂತ್ರಜ್ಞರು ಸೂಕ್ತವಾದ ಮಾರ್ಗದರ್ಶನ ನೀಡಲಿದ್ದಾರೆ ಎಂದು ವಿವರಿಸಿದರು.