ಕೆಎಟಿ ಬೆಂಗ್ಳೂರು ಪೀಠಕ್ಕೆ ಸದಸ್ಯರನೇಮಕ ಕೋರಿ ಅರ್ಜಿ: ನೋಟಿಸ್

| Published : Jun 26 2024, 01:30 AM IST

ಕೆಎಟಿ ಬೆಂಗ್ಳೂರು ಪೀಠಕ್ಕೆ ಸದಸ್ಯರನೇಮಕ ಕೋರಿ ಅರ್ಜಿ: ನೋಟಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ (ಕೆಎಟಿ) ಸದಸ್ಯರನ್ನು ನೇಮಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ (ಕೆಎಟಿ) ಸದಸ್ಯರನ್ನು ನೇಮಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ವಕೀಲ ನರಸಿಂಹರಾಜು ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಪ್ರತಿವಾದಿಗಳಾದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೆಎಟಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಜರಾಗಿ, ಸರ್ಕಾರಿ ನೌಕರರ ಸೇವಾ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಕೆಎಟಿ ವಿಚಾರಣೆ ನಡೆಸಲಿದೆ. ಬೆಂಗಳೂರಿನಲ್ಲಿ ಕೆಎಟಿಯ ಪ್ರಧಾನ ಪೀಠವಿದ್ದರೆ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಾದೇಶಿಕ ಪೀಠಗಳಿವೆ. ಕೆಎಟಿಯಲ್ಲಿ ಅಧ್ಯಕ್ಷರಲ್ಲದೇ ಒಟ್ಟು 9 ಮಂದಿ ಸದಸ್ಯರ ಹುದ್ದೆಗಳಿವೆ. ಅದರಲ್ಲಿ ಅಧ್ಯಕ್ಷ ಹಾಗೂ ಇತರೆ ನಾಲ್ಕು ನ್ಯಾಯಾಂಗ ಸದಸ್ಯರ ಹುದ್ದೆಗಳಿವೆ. ಪ್ರಧಾನ ಪೀಠದಲ್ಲಿ ಅಧ್ಯಕ್ಷರು ಸೇರಿದಂತೆ ಇಬ್ಬರು ನ್ಯಾಯಾಂಗ ಸದಸ್ಯರಿದ್ದಾರೆ. ಮೂರು ಕೋರ್ಟ್‌ ಹಾಲ್‌ಗಳಿವೆ. ಪ್ರಾದೇಶಿಕ ಪೀಠದಲ್ಲಿ ತಲಾ ಒಂದು ಕೋರ್ಟ್‌ ಹಾಲ್‌ಗಳಿವೆ ಎಂದು ವಿವರಿಸಿದರು.

ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಗೆ ರಾಜ್ಯದ 17 ಜಿಲ್ಲೆಗಳು ಬರಲಿವೆ. ಅಧ್ಯಕ್ಷ ನ್ಯಾ.ಆರ್‌.ಬಿ. ಬೂದಿಹಾಳ್‌ ಮತ್ತು ನ್ಯಾಯಾಂಗ ಸದಸ್ಯ ಟಿ.ನಾರಾಯಣ ಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿ. ನಾರಾಯಣಸ್ವಾಮಿ ನಿವೃತ್ತರಾಗಿದ್ದರೂ 2022ರ ಅ.10ರಂದು ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಂತೆ ಸೇವೆಯಲ್ಲಿ ಮುಂದುವರಿಯುತ್ತಿದ್ದು, ಅವರ ಸ್ಥಾನಕ್ಕೆ ಹೊಸ ನೇಮಕಾತಿ ನಡೆದಿಲ್ಲ. ಇನ್ನೂ ಮತ್ತೋರ್ವ ಸದಸ್ಯ ನಾರಾಯಣ 2024ರ ಜೂ.16ರಂದು ನಿವೃತ್ತರಾಗಿದ್ದಾರೆ ಎಂದು ತಿಳಿಸಿದರು.

ನಾರಾಯಣ ಅವರ ನಿವೃತ್ತಿಯಿಂದ ತೆರವಾಗಿರುವ ಹುದ್ದೆಗೆ ನೇಮಕಾತಿಗೆ ಪ್ರತಿವಾದಿಗಳು ನೋಟಿಫಿಕೇಷನ್‌ ಹೊರಡಿಸಿಲ್ಲ. ಇನ್ನೂ ಟಿ.ನಾರಾಯಣ ಸ್ವಾಮಿ ಅವರ ಹುದ್ದೆ ನೇಮಕಾತಿಗೂ ಯಾವುದೇ ಕ್ರಮ ಜರುಗಿಸಿಲ್ಲ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೊಸ ನೇಮಕಾತಿ ಆಗುವರೆಗೂ ಸೇವೆಯಲ್ಲಿ ಮುಂದುವರಿಯಲು ನಾರಾಯಣ ಆಸಕ್ತಿ ಹೊಂದಿದ್ದರೂ ಬೇಡ ಎಂಬುದಾಗಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಹೇಳಿದೆ ಎಂದು ಮಾಹಿತಿ ನೀಡಿದರು.

ಈ ಪ್ರಧಾನ ಪೀಠದಲ್ಲಿ 2,100 ಕೇಸ್‌ಗಳು ವಿಲೇವಾರಿಗೆ ಬಾಕಿಯಿವೆ. ಸದಸ್ಯರಿಲ್ಲದೆ ಬೆಂಗಳೂರು ಪ್ರಧಾನ ಪೀಠದ ಕಾರ್ಯಾಚರಣೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಕೆಎಸ್‌ಎಟಿಯಲ್ಲಿ ಖಾಲಿಯಿರುವ ಸದಸ್ಯರ ಹುದ್ದೆಗಳನ್ನು ನೇಮಕ ಮಾಡಬೇಕು. ಹಾಲಿ ಸದಸ್ಯರ ಸೇವಾವಧಿ ಮುಗಿಯವ ಆರು ತಿಂಗಳ ಮುಂಚಿತವಾಗಿ ಹೊಸ ಸದಸ್ಯರ ನೇಮಕ ಪ್ರಕ್ರಿಯೆಯ ಮೇಲ್ವಿಚಾರಣೆಗೆ ವಿಶೇಷ ಸಮಿತಿ ರಚಿಸಬೇಕು. ಹೊಸ ಸದಸ್ಯರ ನೇಮಕವಾಗುವ ತನಕ ನಾರಾಯಣ ಅವರನ್ನು ಸೇವೆಯಲ್ಲಿ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.