ಪಿಎಂ ವಸತಿ ಯೋಜನೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿ: ಶಾಸಕ ಬಾಲಕೃಷ್ಣ

| Published : Apr 28 2025, 12:47 AM IST

ಪಿಎಂ ವಸತಿ ಯೋಜನೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿ: ಶಾಸಕ ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ ಮೂಲಕ ಫಲಾನುಭವಿಗಳು ಮನೆ ಪಡೆಯಲು ಏಪ್ರಿಲ್ 30 ಕಡೆಯ ದಿನವಾಗಿದ್ದು, ಈ ಯೋಜನೆಯ ಸದುಪಯೋಗ ಪಡೆಯುವಂತೆ ಶಾಸಕ ಬಾಲಕೃಷ್ಣ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ ಮೂಲಕ ಫಲಾನುಭವಿಗಳು ಮನೆ ಪಡೆಯಲು ಏಪ್ರಿಲ್ 30 ಕಡೆಯ ದಿನವಾಗಿದ್ದು, ಈ ಯೋಜನೆಯ ಸದುಪಯೋಗ ಪಡೆಯುವಂತೆ ಶಾಸಕ ಬಾಲಕೃಷ್ಣ ಮನವಿ ಮಾಡಿದರು.

ಹೋಬಳಿಯ ಕಗ್ಗೆರೆ ಗ್ರಾಮದ ಗ್ರಾಮ ದೇವತೆ ಶ್ರೀ ಸಂಪಿಗೆ ಮಾರಮ್ಮ ಊರ ಹಬ್ಬ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದ್ದು, ಫಲಾನುಭವಿಗಳು ಏಪ್ರಿಲ್ 30 ಕೊನೆಯ ದಿನವಾಗಿರುವುದರಿಂದ ಆದಷ್ಟು ಬೇಗ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕಿನ ವಸತಿ ರಹಿತರಿಗೆ ಮನವಿ ಮಾಡಿದರು.

ಭಾರತ ದೇಶ ಧರ್ಮದ ತಳ ಹದಿಯ ಮೇಲೆ ಸದೃಢವಾಗಿದೆ. ಇಡೀ ವಿಶ್ವವೇ ದೇಶದ ಸಂಸ್ಕೃತಿ ಕಲೆ ಸಾಹಿತ್ಯ ಯೋಗವನ್ನು ಅನುಸರಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸುತ್ತಿದೆ. ರಾಜಕಾರಣವನ್ನು ಬದಿಗಿಟ್ಟು ದೇಶದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದರು.

ಕಗ್ಗೆರೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದ ಅವರು, ಗ್ರಾಮದ ಸರ್ಕಾರಿ ಶಾಲೆ ಕಟ್ಟಡ ದುರಸ್ತಿಗೂ ಮುಂಬರುವ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಈಗಾಗಲೇ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದರು.

ಮಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು ಮಾತನಾಡಿ, ಕ್ಷೇತ್ರದ ಶಾಸಕರು ತೋಟಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸಲು ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಮುಂಬರುವ ಹಂಗಾಮಿನಲ್ಲಿ ಈ ಯೋಜನೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಈ ಯೋಜನೆಯಿಂದ ಈ ಭಾಗದ ಸಾವಿರಾರು ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಇತ್ತೀಚೆಗೆ ನಿವೃತ್ತಿಗೊಂಡಿದ್ದ ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಇಒ ಮಂಜೇಗೌಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ನುಗ್ಗೇಹಳ್ಳಿ ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಸಮಾಜ ಸೇವಕ ಹಾಗೂ ಜೆಡಿಎಸ್ ಯುವ ಮುಖಂಡ ಭುವನಹಳ್ಳಿ ಯೋಗೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆಂಪೇಗೌಡ, ರಾಧಮಣಿ ನಾಗೇಂದ್ರ ಬಾಬು, ಮುಖಂಡರಾದ ಪ್ರಕಾಶ್, ನಾಗರಾಜು, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.