ಹೊಸ ಲೈನ್ ಮೆನ್ ಗಳನ್ನು ತಾಲೂಕಿಗೆ ಹೆಚ್ಚಾಗಿ ನೇಮಿಸಿ: ರೈತರ ಆಗ್ರಹ

| Published : Aug 24 2024, 01:15 AM IST

ಹೊಸ ಲೈನ್ ಮೆನ್ ಗಳನ್ನು ತಾಲೂಕಿಗೆ ಹೆಚ್ಚಾಗಿ ನೇಮಿಸಿ: ರೈತರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಆಯೋಜಿಸುವ ಸಭೆ ಮಾಹಿತಿ ರೈತರಿಗೆ ನೀಡದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ನಡೆಸಬೇಕು ಎಂದು ಸೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪಂಪ್ ಸೆಟ್ ಆಧಾರಿತ ಕೃಷಿಕರು ನಮ್ಮ ತಾಲೂಕಿನಲ್ಲಿದ್ದಾರೆ. ಹೊಸ ಲೈನ್‌ಮೆನ್ ನೇಮಕಾತಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಲೈನ್ ಮೆನ್ ಗಳನ್ನು ತಾಲೂಕಿಗೆ ನೇಮಕ ಮಾಡಿಕೊಡುವಂತೆ ತಾಲೂಕು ರೈತಸಂಘದ ಕಾರ್ಯಕರ್ತರು ಸೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.

ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯ ಆವರಣದಲ್ಲಿ ಸೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸೆಸ್ಕಾಂ ಉಪ ವಿಭಾಗ 01 ಮತ್ತು 02 ರ ಜನಸಂಪರ್ಕ ಸಭೆಯಲ್ಲಿ ರೈತರು ಆಗ್ರಹಿಸಿದರು.

ಜನಸಂಪರ್ಕ ಸಭೆ ಮಾಹಿತಿ ವಿದ್ಯುತ್ ಇಲಾಖೆ ರೈತರಿಗೆ ನೀಡುತ್ತಿಲ್ಲ. ಸಭೆ ಆಯೋಜಿಸುತ್ತಿರುವ ಬಗ್ಗೆ ಪತ್ರಿಕೆಗಳ ಮೂಲಕವೂ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಆಯೋಜಿಸುವ ಸಭೆ ಮಾಹಿತಿ ರೈತರಿಗೆ ನೀಡದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ನಡೆಸಬೇಕು ಎಂದು ಸೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜನಸಂಪರ್ಕ ಸಭೆ ಮಾಹಿತಿ ಕರಪತ್ರಗಳನ್ನು ಪ್ರತಿ ಗ್ರಾಪಂ ಮತ್ತು ಡೇರಿ ಸಂಘಗಳ ಮೂಲಕ ರೈತರಿಗೆ ತಿಳಿಸುವ ಕೆಲಸ ಮಾಡಬೇಕು ಸಭೆಗಳಿಗೆ ಪತ್ರಕರ್ತರನ್ನು ಆಹ್ವಾನಿಸುವಂತೆ ಒತ್ತಾಯಿಸಿದರು.

ವಿದ್ಯುತ್ ಇಲಾಖೆ ನಿಯಮಾನುಸಾರ ರೈತರಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ರಿಪೇರಿ ಹೆಸರಿನಲ್ಲಿ ಅನಿರ್ಧಿಷ್ಟ ಕಾಲ ವಿದ್ಯುತ್ ತೆಗೆದು ತೊಂದರೆ ನೀಡಲಾಗುತ್ತಿದೆ ಎಂದರು.

ತುಂಡಾದ ವಿದ್ಯುತ್ ತಂತಿ ತುಳಿದು ತಾಲೂಕಿನಲ್ಲಿ ಈಗಾಗಲೇ ಹಲವು ರೈತರು ಮತ್ತು ಅವರ ಜಾನುವಾರುಗಳು ಸಾವನ್ನಪ್ಪಿವೆ. ಸತ್ತವರಿಗೆ ಪರಿಹಾರ ನೀಡುವ ಬದಲು ಪ್ರತಿಯೊಂದು ಜೀವವೂ ಅಮೂಲ್ಯ ಎನ್ನುವ ಭಾವನೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು

ಅಧೀಕ್ಷಕ ಇಂಜಿನಿಯರ್ ಬಿ.ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ 12 ವಿದ್ಯುತ್ ವಿತರಣಾ ಉಪ ಕೇಂದ್ರಗಳಲ್ಲಿ ಹೆಚ್ಚಿನ ಒತ್ತಡವಿದೆ. ಇದರಿಂದ ಆಗಾಗ್ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದರೆ, ರೈತರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಮುಂದಿನ ದಿನಗಳಲ್ಲಿ ಹಗಲು ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.

ತೇಗನಹಳ್ಳಿ ಎಲ್ಲೆ ಸರ್ವೇ ನಂ.77 ರಲ್ಲಿ ಖಾಸಗಿ ವ್ಯಕ್ತಿ 42 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ. ಈ ಭೂಮಿ ವಶಕ್ಕೆ ಪಡೆದು ಅಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕರೋಟಿ ತಮ್ಮಯ್ಯ, ನಗರೂರು ಕುಮಾರ್, ಹಿರೀಕಳಲೆ ಬಸವರಾಜು, ಚೌಡೇನಹಳ್ಳಿ ಕೃಷ್ಣೇಗೌಡ, ಸಿಂಧುಘಟ್ಟ ಮುದ್ದುಕುಮಾರ್, ನೀತಿಮಂಗಲ ಮಹೇಶ್ ಸೇರಿ ನೂರಾರು ರೈತರು ಇದ್ದರು.

ಸೆಸ್ಕಾಂ ಕಾರ್ಯಪಾಲಕ ಅಭಿಯಂತರೆ ವಿನುತ, ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರತಾಪ, ಕಿರಿಯ ಇಂಜಿನಿಯರುಗಳಾದ ಹರೀಶ್, ಶ್ರೀಕಾಂತ, ಚಂದ್ರಶೇಖರ್, ಶಿವಶಂಕಮೂರ್ತಿ, ಸುನಿಲ್, ಶುಭಾಂಕ್, ರಘು, ರಾಜೇಗೌಡ, ಕೊಣ್ನೂರು, ರವೀಂದ್ರಕುಮಾರ್, ಆಡಳಿತಾಧಿಕಾರಿ ಶಿವಕುಮಾರ್ ಮತ್ತಿತತರಿದ್ದು ರೈತರಿಗೆ ಮಾಹಿತಿ ನೀಡಿದರು.