ಸಾರಾಂಶ
ಹುಬ್ಬಳ್ಳಿ:
ತಾಲೂಕಿನ ಮಂಟೂರಲ್ಲಿನ ಅಡವಿ ಸಿದ್ಧೇಶ್ವರ ಮಠದ ಉತ್ತರಾಧಿಕಾರಿಯನ್ನು ನಗರದ ಖಾಸಗಿ ಆಸ್ಪತ್ರೆಯಲ್ಲೇ ನೇಮಕ ಮಾಡಿದ ಅಪರೂಪದ ಘಟನೆ ನಡೆದಿದೆ. ಇಂದೂಧರ ದೇವರು ಮಠದ ನೂತನ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ.ಕಳೆದ ಐದು ದಿನಗಳ ಹಿಂದೆ ಶ್ರೀಮಠದ ಶಿವಲಿಂಗೇಶ್ವರ ಸ್ವಾಮೀಜಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಭಕ್ತರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಅಲ್ಲದೇ, ಉತ್ತರಾಧಿಕಾರಿ ನೇಮಕ ಮಾಡಲು ಕೋರಿಕೊಂಡಿದ್ದರು. ಭಕ್ತರ ಇಚ್ಛೆಯಂತೆ ಆಸ್ಪತ್ರೆಯ ಆವರಣದಲ್ಲಿ ಭಕ್ತರ ಕೋರಿಕೆ ಮೇರೆಗೆ ಶ್ರೀಮಠದ ಶಿವಲಿಂಗೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಮಂತ್ರ-ಪಠಣದೊಂದಿಗೆ ಸಾಂಕೇತಿಕವಾಗಿ ಶ್ರೀಮಠದ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಶ್ರೀಮಠದ ಶಿವಲಿಂಗೇಶ್ವರ ಸ್ವಾಮೀಜಿ ಅವರು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮತ್ತು ಬಮ್ಮಿಗಟ್ಟಿಸ್ವಾಮೀಜಿ ನೇತೃತ್ವದಲ್ಲಿ ಇಂದೂಧರ ದೇವರನ್ನು ಭಕ್ತರ ಸಮ್ಮುಖದಲ್ಲಿ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದರು.ಇದೇ ವೇಳೆ ಬಮ್ಮಿಗಟ್ಟಿಮಠದ ಸ್ವಾಮೀಜಿ ಮಾತನಾಡಿ, ಅನಾರೋಗ್ಯಕ್ಕೆ ಒಳಗಾದ ಹಿರಿಯ ಸ್ವಾಮೀಜಿ ಅವರನ್ನು ಕೆಲದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿದೆ. 82 ವರ್ಷದ ಸ್ವಾಮೀಜಿಯವರಿಗೆ ಹೃದಯಘಾತವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.
ಕಳೆದ ವರ್ಷವೇ ಆಗಬೇಕಿತ್ತು:ಮೈಸೂರು ಸುತ್ತೂರು ಮಠದಲ್ಲಿ ಬಿಎ ಪದವಿ ಪಡೆಯುತ್ತಿರುವ ಇಂದೂಧರ ದೇವರಿಗೆ ಕಳೆದ ವರ್ಷ ಪಟ್ಟಾಭಿಷೇಕ ಮಾಡಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ಮುಂದೂಡಿದ್ದೆವು. ಇದೀಗ ಸ್ವಾಮೀಜಿ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣುತ್ತಿರುವುದರಿಂದ, ಹುಬ್ಬಳ್ಳಿ, ಮಂಟೂರು, ಬಮ್ಮಿಗಟ್ಟಿಭಕ್ತರ ಸಮ್ಮುಖದಲ್ಲಿ, ಹಿರಿಯ ಸ್ವಾಮೀಜಿ ಅವರ ಅಪೇಕ್ಷೆಯಂತೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಸೊರಬ ತಾಲೂಕಿನ ಬಿಳವಾಣಿ ಗ್ರಾಪಂ ಸದಸ್ಯ ಮಹೇಂದ್ರ ಬಿ. ತಿಳಿಸಿದರು.