499 ಶಿಕ್ಷಕರ ನೇಮಕಕ್ಕೆ ಅನುಮತಿ, ಇನ್ನೂ 240 ಹುದ್ದೆಗಳು ಖಾಲಿ

| Published : Jul 31 2024, 01:06 AM IST

ಸಾರಾಂಶ

ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

- ಬೋಧಕ-ಬೋಧಕೇತರ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಾಕೀತು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಾಶಿಇ ಉಪ ನಿರ್ದೇಶಕ ಜಿ.ಕೊಟ್ರೇಶ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 624, ಪ್ರೌಢಶಾಲೆಯಲ್ಲಿ 117 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾಥಮಿಕ ಶಾಲೆಗಳ 395, ಪ್ರೌಢಶಾಲೆಗಳ 104 ಸೇರಿದಂತೆ ಒಟ್ಟು 499 ಶಿಕ್ಷಕರ ನೇಮಕಾತಿಗೆ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಹುದ್ದೆ ಭರ್ತಿ ಪ್ರಕ್ರಿಯೆ ಸಾಗಿದೆ. ಉಳಿದ 240 ಶಿಕ್ಷಕರ ಹುದ್ದೆಗಳ ಖಾಲಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು.

ಡಿಡಿಪಿಐಗೆ ಭೋಜೇಗೌಡ ತರಾಟೆ:

ವಿಧಾನ ಪರಿಷತ್ತು ಸದಸ್ಯ ಭೋಜೇಗೌಡ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಕಳೆದ ಸಲ ನೀಡಿದ್ದ ಅನುಪಾಲನಾ ವರದಿಯಲ್ಲಿ ಅಗತ್ಯ ಶಿಕ್ಷಕರ ನೇಮಕಾತಿ ಈವರೆಗೂ ಮಾಡಿಕೊಳ್ಳದ ಬಗ್ಗೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ 16ನೇ ಸ್ಥಾನ ಪಡೆದಿದ್ದ ದಾವಣಗೆರೆ ಈ ಸಲ 23ನೇ ಸ್ಥಾನಕ್ಕೆ ಕುಸಿತ ಕಂಡ ಬಗ್ಗೆ ಡಿಡಿಪಿಐಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಮಕ್ಕಳು ವಿದ್ಯೆ ಕಲಿತು, ಸಾಧನೆ ಮಾಡಲು ಶಾಲೆಗೆ ಬರುತ್ತಾರೆ. ಆದರೆ, ಶಾಲೆಗಳಲ್ಲಿ ಶಿಕ್ಷಕರು, ಮೂಲ ಸೌಕರ್ಯಗಳೇ ಇಲ್ಲದಿದ್ದರೆ, ಮಕ್ಕಳಿಗೆ ಗುಣಮಟ್ಟದ ಮತ್ತು ನ್ಯಾಯಯುತ ಶಿಕ್ಷಣ ಹೇಗೆ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಧ್ವನಿಗೂಡಿಸಿದ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ, ಚನ್ನಗಿರಿಯಲ್ಲಿ ರಾತ್ರಿ ಶಾಲೆ ನಡೆಸಲಾಗುತ್ತಿದೆ. ನಮಗಿರುವಷ್ಟು ಆಸಕ್ತಿಯೂ ಶಿಕ್ಷಕರಿಗೆ ಇಲ್ಲದ್ದು ನೋವಿನ ಸಂಗತಿ ಎಂದು ಹೇಳಿದರು.

ಶಿಕ್ಷಕರು ನಿರ್ಲಕ್ಷ್ಯದಿಂದ ಕೆಲಸ ಮಾಡುವುದು ಸಮಂಜಸವಲ್ಲ. ಈವರೆಗೂ ಜಿಲ್ಲೆಯಲ್ಲಿ ಎಷ್ಟು ಶಾಲೆಗಳಲ್ಲಿ ಶೌಚಾಲಯದ ದುರಸ್ತಿ ಮಾಡಿಸಿದ್ದೀರಿ? ಹೊಸದಾಗಿ ಎಷ್ಟು ಶೌಚಾಲಯ ಕಟ್ಟಿಸಿದ್ದೀರಿ ಎಂದು ಜಿಪಂ ಸಿಇಒ ಅವರಿಗೆ ಪ್ರಶ್ನಿಸಿದರು.

ಡಿಡಿಪಿಐ ಕೊಟ್ರೇಶ ಪ್ರತಿಕ್ರಿಯಿಸಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆಅಗತ್ಯ ಕ್ರಮ ಕೈಗೊಂಡಿದ್ದು, ಅಗತ್ಯ ಶಿಕ್ಷಕರ ನೇಮಕಾತಿ ವಿಚಾರವನ್ನೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಶಾಲೆಗಳಲ್ಲಿ ಒಟ್ಟು 112 ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 101 ಶೌಚಾಲಯ ಪೂರ್ಣವಾಗಿವೆ. ಉಳಿದ 11 ಶೌಚಾಲಯಗಳ ನಿರ್ಮಾಣ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲಲಿ 200 ಹೊಸ ಶೌಚೌಲಯ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಅದಕ್ಕೆ ವಿಪ ಸದಸ್ಯ ಭೋಜೇಗೌಡ ಮಾತನಾಡಿ, ಎಷ್ಟು ಶಾಲೆಗಳ ದುರಸ್ತಿ ಕಾರ್ಯ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಡಿಡಿಪಿಐ ಕೊಟ್ರೇಶ ಮಾತನಾಡಿ, ಚನ್ನಗಿರಿ ತಾಲೂಕಿನ 77 ಶಾಲೆ, ದಾವಣಗೆರೆ ಉತ್ತರದ 28, ದಕ್ಷಿಣದ 22, ಹರಿಹರ 32, ಹೊನ್ನಾಳಿ 56 ಹಾಗೂ ಜಗಳೂರಿನ 25 ಶಾಲೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ₹2 ಲಕ್ಷವರೆಗೆ ದುರಸ್ತಿಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ, ಅಸಡ್ಡೆ ಸಹಿಸುವುದಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕು. ಬೋಧಕ-ಬೋಧಕೇತರ ಹುದ್ದೆ ಭರ್ತಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿ. ಸರ್ಕಾರದ ಮಟ್ಟದಲ್ಲಿ ನಾವು ಸಂಬಂಧಿಸಿದ ಇಲಾಖೆ ಸಚಿವರ ಬಳಿ ಚರ್ಚಿಸಿ, ಅಗತ್ಯ ಶಿಕ್ಷಕರನ್ನು ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ನರೇಗಾಡದಿ ಸುಮಾರು 2 ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡಿದ್ದ ರಸ್ತೆ, ಚರಂಡಿಗಳು ಸಂಪೂರ್ಣ ಹಾಳಾಗಿವೆ. ನರೇಗಾದಡಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು. ಆಗ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಹ ಧ್ವನಿಗೂಡಿಸಿ, ಹಾಳಾಗಿರುವ ರಸ್ತೆ, ಚರಂಡಿಗಳನ್ನು ಹೊಸದಾಗಿ ನಿರ್ಮಿಸುವಂತೆ ಜಿಪಂ ಸಿಇಒ ಅವರಿಗೆ ಆದೇಶಿಸಿದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ವಿಪ ಸದಸ್ಯ ಕೆ.ಎಸ್. ನವೀನ, ವಿಪ ಸದಸ್ಯ ಧನಂಜಯ, ಡಿ.ಟಿ. ಶ್ರೀನಿವಾಸ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ಯಾಮಲಾ ಇಕ್ಬಾಲ್ ಇತರರು ಇದ್ದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಜಿಲ್ಲಾಸ್ಪತ್ರೆ, ಅಕ್ಷರ ದಾಸೋಹ, ಮೀನುಗಾರಿಕೆ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

- - -

ಬಾಕ್ಸ್‌ * "ಮನೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಿ "ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಅತಿವೃಷ್ಟಿಯಿಂದಾಗಿ ಮನೆ ಹಾನಿಗೀಡಾಗಿ ಸಂಕಷ್ಟಕ್ಕೆ ಈಡಾಗುವ ಸಂತ್ರಸ್ತರಿಗೆ ಭಾಗಶಃ ಮನೆ ಹಾನಿಗೀಡಾದರೆ ₹6500, ಪೂರ್ಣ ಮನೆ ಕುಸಿತವಾಗಿದ್ದರೆ ₹1.20 ಲಕ್ಷವರೆಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು. ಅದಕ್ಕೆ ಶಾಸಕ ಬಸವರಾಜ ಶಿವಗಂಗಾ, ಭಾಗಶಃ ಮನೆ ಹಾನಿಗೆ ₹6500 ಮಾತ್ರ ನೀಡಿದರೆ ದುರಸ್ತಿ ಹೇಗೆ ಸಾಧ್ಯ? ಪರಿಹಾರ ಮೊತ್ತ ಹೆಚ್ಚಿಸಿ, ಸಂತ್ರಸ್ತರಿಗೆ ಸ್ಪಂದಿಸುವಂತೆ ಹೇಳಿದರು.

- - -