ಸಾರಾಂಶ
ಉಡೇವಾ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯದ ಉದ್ಘಾಟನೆ.
ಕನ್ನಡಪ್ರಭ ವಾರ್ತೆ, ತರೀಕೆರೆಪಶು ವೈದ್ಯಾಧಿಕಾರಿಗಳು, ಪಶು ನಿರೀಕ್ಷಕರು ಹಾಗೂ ಡಿ ದರ್ಜೆ ನೌಕರರು ಸೇರಿದಂತೆ ಎಲ್ಲಾ ಪಶು ಚಿಕಿತ್ಸಾಲಯಗಳಿಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ಪಶು ಸಂಗೋಪನ ಮತ್ತು ರೇಷ್ಮೇ ಸಚಿವ ಕೆ. ವೆಂಕಟೇಶ್ ಹೇಳಿದರು.
ಮಂಗಳವಾರ ಸಮೀಪದ ಉಡೇವಾ ಗ್ರಾಮದ ನೂತನ ಪಶು ಚಿಕಿತ್ಸಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಹೊಸ ಪಶು ಚಿಕಿತ್ಸಾಲಯಗಳ ಸ್ಥಾಪನೆಗೆ ಅವಕಾಶ ನೀಡಿರುವ ಜೊತೆಗೆ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ₹5ಗಳಷ್ಟು ಸಹಾಯಧನ ನೀಡಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಉಚಿತ ಚಿಕಿತ್ಸೆ, ಔಷಧಗಳ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಉಡೇವಾ, ಗುಳ್ಳದ ಮನೆ, ಬಾವಿಕೆರೆ ಮತ್ತು ಹಾದಿಕೆರೆ ಗ್ರಾಮದ ವ್ಯಾಪ್ತಿಯನ ರೈತರು ವ್ಯವಸಾಯದ ಜೊತೆಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ಅವಲಂಭಿಸಿದ್ದು, ಉಡೇವಾ ಗ್ರಾಮದಲ್ಲಿ ಪಶು ಚಿಕಿತ್ಸಾಲಯಕ್ಕೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದ ಮೂರು ಗ್ರಾಮಗಳಲ್ಲೂ ಪಶು ಚಿಕಿತ್ಸಾಲಯ ಆರಂಭಿಸಿ, ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪಶು ಸಂಗೋಪನಾ ಸಚಿವರು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಪಶು ಇಲಾಖೆಯಿಂದ ರಾಜ್ಯಾದಾದ್ಯಂತ ಈ ಸಾಲಿನಲ್ಲಿ 20 ಪಶು ಚಿಕಿತ್ಸಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಡೇವಾ, ಮುಗುಳಿವಳ್ಳಿ ಗ್ರಾಮಗಳಲ್ಲಿ ನೂತನ ಪಶು ಚಿಕಿತ್ಸಾಲಯ ಆರಂಭಸುತ್ತಿರುವುದಕ್ಕೆ ಸಚಿವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ ಅವರು ಕ್ಷೇತ್ರಕ್ಕೆ ಮುಂದಿನ ಸಾಲಿನಲ್ಲಿ 3 ಪಶು ಚಿಕಿತ್ಸಾಲಯಗಳನ್ನು ನೀಡುವಂತೆ ಮನವಿ ಮಾಡಿದರು. ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ.ರಾಜಪ್ಪ ಮಾತನಾಡಿ ಉಡೇವಾ ಗ್ರಾಮದಲ್ಲಿ ಸಮಾರು 2000 ದಷ್ಟು ಸಾಕು ಪ್ರಾಣಿಗಳಿದ್ದು, ಅವುಗಳ ಚಿಕಿತ್ಸೆಗೆ ಲಿಂಗದಹಳ್ಳಿ ಇಲ್ಲವೇ ಕಾಮನದುರ್ಗ ಪಶು ಚಿಕಿತ್ಸಾಲಯಗಳಿಗೆ ಹೋಗಬೇಕಾಗಿತ್ತು. ಇದನ್ನು ಶಾಸಕರಿಗ ತಿಳಿಸಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ನೀಡುವಂತೆ ಮನವಿ ಮಾಡಿದ್ದರಿಂದ ಶಾಸಕರು ಉಡೇವಾ ಗ್ರಾಮಕ್ಕೆ ಪಶು ಚಿಕಿತ್ಸಾಲಯ ನೀಡಿದ್ದು ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ಜಿ ರಮೇಶ್, ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್ , ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಎಲ್. ತಮ್ಮಯ್ಯ, ಗ್ರಾಪಂ ಉಪಾಧ್ಯಕ್ಷೆ ಸುಜಿತ ಸಂತೋಷ್, ಗ್ರಾ.ಪಂ. ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ ಮಂಜು, ಪಶು ಸಂಗೋಪನಾ ಇಲಾಖೆ ಆಯುಕ್ತರಾದ ರೂಪ, ನಿರ್ದೇಶಕ ಮಂಜುನಾಥ ಎಸ್ ಪಾಳೇಗಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ. ದೇವೇಂದ್ರಪ್ಪ, ಡಾ.ಮೋಹನ್ ಕುಮಾರ್, ಡಾ. ಗೋವಿಂದಪ್ಪ ಭಾಗವಹಿಸಿದ್ದರು.
29ಕೆಟಿಆರ್.ಕೆ.9ಃತರೀಕೆರೆ ಸಮೀಪದ ಉಡೇವಾ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಸಮಾರಂಭವನ್ನು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಜಿ.ಎಚ್. ಶ್ರೀನಿವಾಸ್, ಗ್ರಾ.ಪಂ ಅಧ್ಯಕ್ಷೆ ಭಾರತಿ ಸಿ ರಾಜಪ್ಪ, ಉಪಾಧ್ಯಕ್ಷೆ ಸುಜಿತ ಸಂತೋಷ್ ಜ್ಯೋತಿ ಬೆಳೆಗುವ ಮೂಲಕ ಉದ್ಘಾಟಿಸಿದರು.