ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಳ್ಳಾರಿ ಹಾಗೂ ಹಾಸನ ಜಿಲ್ಲೆಗಳ ಉಸ್ತುವಾರಿ ಸಂಬಂಧ ಗೊಂದಲ ಕಡೆಗೂ ಪರಿಹರಿಸಲಾಗಿದ್ದು, ರಹೀಂ ಖಾನ್ ಅವರನ್ನು ಬಳ್ಳಾರಿ ಸ್ವಾತಂತ್ರೋತ್ಸವದ ದ್ವಜಾರೋಹಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಆದೇಶವನ್ನು ರದ್ದುಪಡಿಸಲಾಗಿದೆ.ಗುರುವಾರಷ್ಟೇ ಹಾಸನಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬಳ್ಳಾರಿಗೆ ಪೌರಾಡಳಿತ ಇಲಾಖೆ ಸಚಿವ ರಹೀಂಖಾನ್ ಅವರುಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಿತ್ತು. ಶುಕ್ರವಾರ ಈ ಆದೇಶ ವಾಪಸ್ ಪಡೆದಿದ್ದು, ಹಾಸನ ಉಸ್ತುವಾರಿ ಕೃಷ್ಣ ಬೈರೇಗೌಡ ಅವರನ್ನು ಮುಂದುವರೆಸಿ ಸಚಿವ ರಹೀಂ ಖಾನ್ ಅವರನ್ನು ಬಳ್ಳಾರಿಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಸೀಮಿತಗೊಳಿಸಿ ಆದೇಶಿಸಿದೆ.
ಈ ಗೊಂದಲಕ್ಕೆ ಕಾರಣವಾದ ಅಂಶಗಳು ಕುತೂಹಲಕಾರಿಯಾಗಿದ್ದು, ಇದರ ಹಿಂದೆ ಹಾಸನ ಜಿಲ್ಲೆಗೆ ಹಿಂದಿನ ಉಸ್ತುವಾರಿಯಾಗಿದ್ದ ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ಅವರ ನಡುವಿನ ಜಟಾಪಟಿ ಕಾರಣ ಎನ್ನಲಾಗುತ್ತಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದ ಸಚಿವ ಕೆ.ಎನ್.ರಾಜಣ್ಣ ಅವರಿಗೆ ನಿಗಮ-ಮಂಡಳಿ ನಿರ್ದೇಶಕರ ನೇಮಕಾತಿ ವಿಚಾರದಲ್ಲಿ ಸಚಿವರ ಬದಲಾಗಿ ಸ್ಥಳೀಯ ಶಾಸಕ ಶಿವಲಿಂಗೇಗೌಡ ಅವರ ಮಾತಿಗೆ ಮನ್ನಣೆ ದೊರಕಿತ್ತು.ಇದರಿಂದಾಗಿ ರಾಜಣ್ಣ ಹಾಸನ ಉಸ್ತುವಾರಿ ಬದಲಾಗಿ ಪರಿಶಿಷ್ಟ ಪಂಗಡದ ಪ್ರಾಬಲ್ಯವಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡುವಂತೆ ರಾಜಣ್ಣ ಕೋರಿದ್ದರು ಎನ್ನಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಮುಖಂಡರಿಗೆ ಸಚಿವ ಕೆ.ಎನ್.ರಾಜಣ್ಣರಿಗೆ ಬಳ್ಳಾರಿ ಉಸ್ತುವಾರಿಯಾಗಿ ಬರುವುದು ಪಥ್ಯವಾಗಲಿಲ್ಲ.
ಏಕೆಂದರೆ, ಈ ಹಿಂದೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಸಚಿವ ನಾಗೇಂದ್ರ ಅವರು ಸಂಪುಟಕ್ಕೆ ವಾಪಸ್ ಆಗುವವರೆಗೆ ಹಾಲಿ ಜಿಲ್ಲಾ ಉಸ್ತುವಾರಿ ಆಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಮುಂದುವರೆಸಬೇಕು. ಬೇರೆ ಯಾರನ್ನೂ ಹೊಸದಾಗಿ ನೇಮಿಸುವುದು ಬೇಡ ಎಂಬುದು ಅವರ ನಿಲುವಾಗಿತ್ತು ಎನ್ನಲಾಗಿದೆ.ಹೀಗಾಗಿ, ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಮಾಡುವುದು ಹಾಗೂ ಈ ಹೊಣೆಯನ್ನು ಸಚಿವ ಕೃಷ್ಣಬೈರೇಗೌಡ ಅವರಿಗೆ ನೀಡುವುದು. ಇನ್ನು ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಯ ಉಸ್ತುವಾರಿ ಹೊಂದಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ ನೆರವಾಗುವ ಉದ್ದೇಶದಿಂದ ಬಳ್ಳಾರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಡೆಸಲು ಸಚಿವ ರಹೀಂ ಖಾನ್ ಅವರನ್ನು ನಿಯೋಜಿಸಲು ತೀರ್ಮಾನವಾಗಿತ್ತು.
ಆದರೆ ಆದೇಶದ ಹೊರಡಿಸುವ ವೇಳೆ ಅಧಿಕಾರಿಗಳು, ಹಾಸನ ಜಿಲ್ಲಾ ಉಸ್ತುವಾರಿ ನೇಮಕದೊಂದಿಗೆ ರಹೀಂ ಖಾನ್ ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ನೇಮಕದ ಆದೇಶ ಹೊರಡಿಸಿದರು. ಈ ವಿಷಯ ತಿಳಿಯುತ್ತಿದಂತೆ ಶುಕ್ರವಾರ ಬಳ್ಳಾರಿ ಜಿಲ್ಲೆಯ ಶಾಸಕರಾದ ಕಂಪ್ಲಿ ಗಣೇಶ್, ಭರತ್ ರೆಡ್ಡಿ ಸೇರಿ ಮೊದಲಾದವರು ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ನಾಗೇಂದ್ರ ಸಂಪುಟಕ್ಕೆ ಸೇರ್ಪಡೆ ಆಗುವವರೆಗೆ ಹಾಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದರು.ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹಿಂಪಡೆದಿದ್ದು, ಹಾಸನ ಉಸ್ತುವಾರಿ ಕೃಷ್ಣಬೈರೇಗೌಡ ಅವರನ್ನು ಮುಂದುವರೆಸಿ, ಸಚಿವ ರಹೀಂ ಖಾನ್ ಅವರನ್ನು ಧ್ವಜಾರೋಹಣಕ್ಕೆ ಸೀಮಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.