ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ರಾಜ್ಯಾದ್ಯಂತ ಪಕ್ಷ ಸಂಘಟಿಸುವ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 19 ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಾಜಿ ಶಾಸಕ ನರೇಂದ್ರ ತಿಳಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗ, ಚಾಲಕರ ವಿಭಾಗ, ಕಾರ್ಮಿಕರ ವಿಭಾಗ, ಬೀದಿಬದಿ ವ್ಯಾಪಾರಿಗಳು ಸೇರಿದಂತೆ 19 ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಸಂಬಂಧ ಆಯೋಸಿದ್ದ ಸಭೆಯಲ್ಲಿ ಮಾತನಾಡಿದರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಎಲ್ಲ ಸಮಾಜದವರನ್ನು ಸಂಘಟಿಸುವ ದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗುತ್ತಿದೆ. ನೇಮಕವಾಗುವ ಪದಾಧಿಕಾರಿಗಳು ಮುಂದಿನ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಿಗೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ಸಮಿತಿಯ ಪದಾಧಿಕಾರಿಗಳು ಪಕ್ಷದ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಯಾವುದೇ ಪಕ್ಷದವರು ಕಷ್ಟದಲ್ಲಿದ್ದಾಗ ಅವರಿಗೆ ಸ್ಪಂದಿಸಬೇಕು. ಪದಾಧಿಕಾರಿಗಳು ಕೇವಲ ವಿಸಿಟಿಂಗ್ ಕಾರ್ಡಿಗಾಗಿ ಪದಾಧಿಕಾರಿಗಳಾಗಬಾರದು ಪಕ್ಷಕ್ಕೆ ಹಗಲಿರುಳು ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಬೇಕು. ಪ್ರತಿಯೊಂದು ಸಮಿತಿಯ ಸದಸ್ಯರು ಸರ್ಕಾರದ ಪ್ರಮುಖ ಯೋಜನೆಗಳನ್ನು ಕಟ್ಟಡ ಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು. ಸರ್ಕಾರ ಬಂದು ಎರಡು ವರ್ಷಗಳು ಕಳೆಯುತ್ತಿದ್ದರೂ ಕೆಲವು ಫಲಾನುಭವಿಗಳಿಗೆ ಕೆಲವು ಸೌಲಭ್ಯಗಳು ಸಿಗುತ್ತಿಲ್ಲ ಇಂತಹ ಪಲಾನುಭವಿಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಹುಡುಕಿ ಅವರ ಸಮಸ್ಯೆ ಬಗೆಹರಿಸಬೇಕು ಎಂದರು.ಕಳೆದ ತಿಂಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಳಿದಂತೆ ಹಿಂದುಳಿದ ವರ್ಗ ಮಹಿಳಾ ಕಾಂಗ್ರೆಸ್ ಕಾರ್ಮಿಕರ ವಿಭಾಗ ಚಾಲಕರ ವಿಭಾಗ ಬೀದಿಬದಿ ವ್ಯಾಪಾರಿ ರೈತ ಕಾಂಗ್ರೆಸ್ ಕಾನೂನು ವಿಭಾಗಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಬೇಕಿದೆ. ಪ್ರತಿಯೊಂದು ಸಮಿತಿಗಳಲ್ಲಿಯೂ 21 ಸದಸ್ಯರನ್ನು ಕಡ್ಡಾಯ ನೇಮಕ ಮಾಡಬೇಕು ಎಂದು ಅಧ್ಯಕ್ಷರಿಗೆ ಸೂಚನೆ ನೀಡಿದರು.
ಮಹಿಳಾ ಕಾಂಗ್ರೆಸ್ ಸಮಾವೇಶ ಆಯೋಜನೆ:ರಾಮಾಪುರ ಹಾಗೂ ಹನೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ಸಮಾವೇಶ ಮಾಡಲು ಅಧ್ಯಕ್ಷರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದರು. ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರದಿಂದ ಒಬ್ಬರಿಗೆ ನಾಮ ನಿರ್ದೇಶನ ಮಾಡಬಹುದು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಎಲ್ಲ ಸಮಾಜದವರಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಿ ತಯಾರಿಸಿ ಕೊಟ್ಟರೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಹೊಸೂರು ಮಹದೇವಸ್ವಾಮಿ ಪ್ರ.ಕಾರ್ಯದರ್ಶಿಯಾಗಿ ಕೌದಳ್ಳಿ ಪ್ರವೀಣ್ ರನ್ನು, ಹನೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸುವರ್ಣರನ್ನು ನೇಮಕ ಮಾಡಲಾಯಿತು.ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಪಪಂ ಸದಸ್ಯ ಗಿರೀಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ರಾಚಪ್ಪ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜು, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಟರಾಜು, ಯುತ್ ಕಾಂಗ್ರೇಸ್ ಅಧ್ಯಕ್ಷ ಮಾದೇಶ್, ತಾಲ್ಲೂಕು ಅಧ್ಯಕ್ಷ ಸುರೇಶ್, ಮುಖಂಡರುಗಳಾದ ಪಾಳ್ಯ ಕೃಷ್ಣ, ಮಂಗಲ ಪುಟ್ಟರಾಜು, ಚೇತನ್ ದೊರೈರಾಜ್, ಉಪ್ಪಾರ ಸಮುದಾಯ ಮುಖಂಡ ಶಿವಕುಮಾರ್, ಮುರುಡೇಶ್ವರಸ್ವಾಮಿ, ಕೌದಳ್ಳಿ ಗೋವಿಂದ, ವಾಜೀದ್ ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.