ಹುಬ್ಬಳ್ಳಿಯನ್ನು ಧೂಳಮುಕ್ತ ನಗರ ನಿರ್ಮಾಣಕ್ಕಾಗಿ, ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ 15 ದಿನಕ್ಕೊಮ್ಮೆ ಮಾತ್ರ ನೀರು ಬಿಡುವ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಗುರುರಾಜ ಹುಣಸಿಮರದ ಹೇಳಿದರು.

ಹುಬ್ಬಳ್ಳಿ:

ಈ ಹಿಂದೆ ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಲು ಪ್ರತಿ ವಾರ್ಡ್‌ನಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಜೆಡಿಎಸ್‌ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ನಗರದಲ್ಲಿ ಮಹಾನಗರ ಜೆಡಿಎಸ್‌ನಿಂದ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹುಬ್ಬಳ್ಳಿಯನ್ನು ಧೂಳಮುಕ್ತ ನಗರ ನಿರ್ಮಾಣಕ್ಕಾಗಿ, ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ 15 ದಿನಕ್ಕೊಮ್ಮೆ ಮಾತ್ರ ನೀರು ಬಿಡುವ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲು ವಾರ್ಡ್ ಮಟ್ಟದಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿ ನೇಮಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಈ ಕಾರ್ಯಕ್ಕಾಗಿ ಪ್ರಮುಖ 10 ಜನರ ತಂಡ ರಚಿಸಿ, ಅವರು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರನ್ನು ಶಿಫಾರಸು ಮಾಡುವಂತೆ ತೀರ್ಮಾನಿಸಲಾಗಿದೆ. 10 ದಿನಗಳೊಳಗೆ ತಾಲೂಕು ಸಮಿತಿ ಹಾಗೂ ವಾರ್ಡ್ ಸಮಿತಿ ನೇಮಿಸಲಾಗುವುದು ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ನಗರದಲ್ಲಿ ಕೊಲೆ ಹಾಗೂ ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಆಡಳಿತ ಯಂತ್ರ ಕುಸಿತಗೊಂಡಿದೆ. ಮಹಾನಗರ ಪಾಲಿಕೆ ಹೆಚ್ಚು ತೆರಿಗೆ ವಸೂಲಿ ಮಾಡಿ ಜನರಿಗೆ ಯಾವುದೇ ಸೌಲಭ್ಯ ನೀಡದೇ ಜನರನ್ನು ವಂಚಿಸುತ್ತಿದೆ ಎಂದು ಟೀಕಿಸಿದರು. ಪಾಲಿಕೆ ವಿರುದ್ಧ ಪಕ್ಷವು ಶೀಘ್ರದಲ್ಲೇ ಹೋರಾಟ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಈ ವೇಳೆ ಮಹಾನಗರ ಜಿಲ್ಲಾ ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಸೌದತ್ತಿ, ಮುಖಂಡರಾದ ಅಹ್ಮದ್ ಅರ್ಸಿಕೇರಿ, ಶಂಕರ ಪವಾರ, ವೀರನಗೌಡ ಪಾಟೀಲ, ಶ್ರೀಕಾಂತ ಮಗಜಿಗೊಂಡಿ, ಎಂ.ಎ. ಪಠಾಣ್, ಇನಾಯತ್ ಹೆಬ್ಬಳ್ಳಿ, ಶ್ರೀಕಾಂತ ತೆಲಗಾರ್, ಶರಣಪ್ಪ ತಳ್ಳೂರು ಸೇರಿದಂತೆ ಹಲವರಿದ್ದರು.