ರಸ್ತೆ ಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಶ್ಲಾಘನೆ

| Published : Sep 06 2024, 01:03 AM IST

ಸಾರಾಂಶ

ಬೇಲೂರು ಪಟ್ಟಣದ ಹೃದಯ ಭಾಗದಲ್ಲಿರುವ ಬೇಲೂರು ಬಸ್ ನಿಲ್ದಾಣ ಮುಂಭಾಗ ಹಾಗೂ ಅಕ್ಕಪಕ್ಕದ ಮುಖ್ಯ ರಸ್ತೆಗಳಲ್ಲಿ ಹಬ್ಬದ ದಿನಗಳಂದು ಅತಿ ಹೆಚ್ಚು ವ್ಯಾಪಾರಿಗಳು ರಸ್ತೆಬದಿ ಹಬ್ಬಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಗೌರಿ ಗಣೇಶ ಹಬ್ಬ ಆಚರಿಸಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಹಿನ್ನೆಲೆಯಲ್ಲಿ ರಸ್ತೆ ಬಳಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿರುವ ಪುರಸಭೆ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಸಾರ್ವಜನಿಕರು, ವ್ಯಾಪಾರಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರ ವಾರ್ತೆ ಬೇಲೂರು

ಗೌರಿ ಗಣೇಶ ಹಬ್ಬ ಆಚರಿಸಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಹಿನ್ನೆಲೆಯಲ್ಲಿ ರಸ್ತೆ ಬಳಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿರುವ ಪುರಸಭೆ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಸಾರ್ವಜನಿಕರು, ವ್ಯಾಪಾರಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಬೇಲೂರು ಬಸ್ ನಿಲ್ದಾಣ ಮುಂಭಾಗ ಹಾಗೂ ಅಕ್ಕಪಕ್ಕದ ಮುಖ್ಯ ರಸ್ತೆಗಳಲ್ಲಿ ಹಬ್ಬದ ದಿನಗಳಂದು ಅತಿ ಹೆಚ್ಚು ವ್ಯಾಪಾರಿಗಳು ರಸ್ತೆಬದಿ ಹಬ್ಬಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಹಿಂದುಗಳಿಗೆ ಪ್ರಮುಖ ಹಬ್ಬವಾಗಿರುವ ಸಂಕ್ರಾಂತಿ , ದೀಪಾವಳಿ, ಗಣೇಶ ಚತುರ್ಥಿ ಹಾಗೂ ನವರಾತ್ರಿಯ ಆಯುಧ ಪೂಜೆ ಸಂದರ್ಭಗಳಲ್ಲಿ ಹಬ್ಬದ ಹಿಂದಿನ ದಿನ ಸಾವಿರಾರು ಗ್ರಾಹಕರು ಹಬ್ಬಕ್ಕೆ ಅವಶ್ಯಕತೆ ಇರುವ ಪರಿಕರಗಳನ್ನು ಕೊಳ್ಳಲು ಮುಗಿಬೀಳುತ್ತಾರೆ. ಈ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ದೇವಸ್ಥಾನ ರಸ್ತೆಯಿಂದ ನೆಹರು ನಗರದ ವರಗೆ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಟ್ಟಲೆ ಪ್ರವಾಸಿಗರು ಸೇರಿದಂತೆ ನಾಗರಿಕರು ಪರಿತಪಿಸುವಂತಾಗಿತ್ತು. ಆದರೆ ಈ ಬಾರಿ ಪುರಸಭೆಯವರು ನೂತನ ಕ್ರಮ ಕೈಗೊಂಡಿದ್ದು, ಗೌರಿ ಗಣೇಶ ಹಬ್ಬದ ಹಿಂದಿನ ದಿನ ರಸ್ತೆ ಬದಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ಬಸ್ ನಿಲ್ದಾಣ ಸಮೀಪವಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಒಂದೇ ಸ್ಥಳದಲ್ಲಿ ತರಕಾರಿಗಳು, ಹಣ್ಣು ಹಂಪಲು, ಪಾತ್ರೆಗಳು ಹಾಗೂ ಗೌರಿ ಗಣೇಶ ಹಬ್ಬಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ತಮ್ಮ ವಾಹನವನ್ನು ಮೈದಾನದ ಪಕ್ಕದಲ್ಲಿ ನಿಲ್ಲಿಸಿ, ಸರಾಗವಾಗಿ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗಿದೆ. ಇದರಿಂದಾಗಿ ಮುಖ್ಯ ರಸ್ತೆಗಳು ತಕ್ಕಮಟ್ಟಿಗೆ ಪ್ರವಾಸಿಗರು ಹಾಗೂ ನಾಗರಿಕರು ಓಡಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ. ಸೊಪ್ಪಿನ ವ್ಯಾಪಾರ ಮಾಡುವ ಕಮಲಮ್ಮ ಹಾಗೂ ದಿನಸಿ ವಸ್ತು ಮಾರಾಟ ಮಾಡುವ ಮಂಜುನಾಥ್ ಅವರು ಮಾತನಾಡಿ, ಪ್ರತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ರಸ್ತೆಯ ಪಕ್ಕ ಇಕ್ಕಟ್ಟಿನಲ್ಲಿ ವ್ಯಾಪಾರ ಮಾಡುವಂತಾಗಿತ್ತು. ಗ್ರಾಹಕರು ತಮ್ಮ ವಾಹನಗಳನ್ನು ನಿಲ್ಲಿಸಲು ಪರದಾಡುವಂತಾಗಿತ್ತು. ಅಲ್ಲದೆ ಕೆಲವೊಮ್ಮೆ ಟ್ರಾಫಿಕ್ ಜಾಮ್‌ ಉಂಟಾಗಿ ಪೊಲೀಸರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಗ್ರಾಹಕರು ಒಂದೆಡೆಯಿಂದ ಮತ್ತೊಂದಡೆಗೆ ರಸ್ತೆದಾಟಲು ಹರಸಾಹಸ ಪಡುವಂತಾಗಿತ್ತು. ಆದರೆ ಈಗ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಿರುವುದರಿಂದ ನಿರಾಳವಾಗಿ ವ್ಯಾಪಾರ ಮಾಡುವಂತಾಗಿದೆ. ಇದಕ್ಕೆ ಕಾರಣರಾದ ನೂತನ ಅಧ್ಯಕ್ಷ ಅಶೋಕ್ ಹಾಗೂ ಪುರಸಭೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್‌ರವರು ಸಾರ್ವಜನಿಕವಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧ್ಯಕ್ಷರಾದ ಮರುದಿನವೇ ಅಂಗಡಿ ವ್ಯಾಪಾರಸ್ಥರು ಫುಟ್ಪಾತ್ ಮೇಲೆ ಸರಂಜಾಮು ಇಟ್ಟು ಪಾದಚಾರಿಗಳು ನಡೆದಾಡಲು ಪರದಾಡುತ್ತಿದ್ದ ಸಂದರ್ಭದಲ್ಲಿ ಸಂಪೂರ್ಣವಾಗಿ ತೆರವುಗೊಳಿಸಿದರು. ಅಲ್ಲದೆ ರಸ್ತೆ ಉದ್ದಕ್ಕೂ ತಮ್ಮ ಅಂಗಡಿಗಳ ನಾಮಫಲಕವನ್ನು ಲೈಟ್ ಕಂಬಕ್ಕೆ ಹಾಗೂ ಎಲ್ಲಂದರಲ್ಲಿ ಅಡ್ಡ ದಡಿಯಾಗಿ ಕಟ್ಟಿದ್ದ ಬೋರ್ಡ್‌ಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ತೆಗೆಸಿದ್ದಾರೆ. ಈಗ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಕಾಲೇಜು ಮೈದಾನಕ್ಕೆ ಸ್ಥಳಾಂತರ ಮಾಡಿ ವಾಹನ ದಟ್ಟಣೆಗೆ ಕಡಿವಾಣ ಹಾಕಿರುವ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.