ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯದ ಕಂದಾಯ ಸುಧಾರಣೆಗಳನ್ನು ಅಭ್ಯಸಿಸಲು ಕೋಲಾರ ಜಿಲ್ಲೆಗೆ ಆಗಮಿಸಿದ ಮಿಜೋರಾಂ ರಾಜ್ಯದ ಭೂ ಕಂದಾಯ ಹಾಗೂ ವಸಾಹತು ಇಲಾಖೆಯ ಸಚಿವ ಬಿ.ಲಾಲ್‌ಚಿಂಸೋವ ಹಾಗೂ ಮಿಜೋರಾಂ ಸರ್ಕಾರದ ಕಾರ್ಯದರ್ಶಿ ವನ್‌ಲಾಲ್‌ಮಾವಿಯಾರನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ವಾಗತಿಸಿ ಕಂದಾಯ ಇಲಾಖೆಯ ವಿವಿಧ ವಿವರಗಳನ್ನು ಅವರಿಗೆ ನೀಡಿದರು. ಉತ್ಸುಕತೆಯಿಂದ ಪ್ರತಿಯೊಂದು ವಿವರಗಳನ್ನು ಜಿಲ್ಲಾಧಿಕಾರಿಯಿಂದ ಕೇಳಿದ ಅಧ್ಯಯನ ತಂಡ ಕೋಲಾರ ಜಿಲ್ಲೆಯ ಆಡಳಿತ ವೈಖರಿ ಶ್ಲಾಘಿಸಿತು. ಸಾರ್ವಜನಿಕರಿಗೆ ವಿವಿಧ ಕಂದಾಯ ಸೇವೆಗಳನ್ನು ತ್ವರಿತಗತಿಯಲ್ಲಿ ವಿತರಿಸುತ್ತಿರುವ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ವೃತ್ತಿಪರ ಕಾಳಜಿ ಶ್ಲಾಘಿಸಿದರು.ನಾಡಕಚೇರಿ ಮೂಲಕ ವಿತರಣೆ
ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ಯಾವುದೇ ವಿಳಂಬವಿಲ್ಲದೆ, ಶೇ.೧೦೦ ರಷ್ಟು ವಿತರಿಸಿ ರಾಜ್ಯದಲ್ಲೇ ಪ್ರಥಮ ರ್‍ಯಾಂಕಿಂಗ್ ಪಡೆಯುವ ಸಾಧನೆ ಮಾಡಿದೆ. ಈ ಸೇವೆಯಲ್ಲಿ ನಾಗರೀಕರಿಗೆ ವಿವಿಧ ಸೇವೆಗಳನ್ನು ನಾಡಕಚೇರಿ ಮೂಲಕ ಸುಲಭವಾಗಿ ತಲುಪಿಸುವ ಗುರಿ ಹೊಂದಿದೆ. ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಮಾಜಿಕ ಭದ್ರತಾ ಪಿಂಚಣಿಗಳು, ಜಾತಿ ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಫಹಣಿ, ಮ್ಯುಟೇಶನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ ೨೫ಕ್ಕೂ ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಒದಗಿಸಲಾಗುತ್ತಿದೆ. ಈ ವಿತರಣೆಗಳಲ್ಲಿ ಕೋಲಾರ ಜಿಲ್ಲೆಯು ಪ್ರಸ್ತುತ ಶೇ.೧೦೦ರಷ್ಟು ವಿಳಂಬ ರಹಿತ ಸೇವೆಯನ್ನು ನೀಡುವ ಖಾತರಿ ಪಡಿಸಿಕೊಳ್ಳಲಾಗುತ್ತಿದೆ. ಕಳೆದ ಏಳು ತಿಂಗಳಿಂದ ಸದರಿ ಸೇವೆ ಒದಗಿಸುವಲ್ಲಿ ರಾಜ್ಯಕ್ಕೆ ಕೋಲಾರ ಜಿಲ್ಲೆಯು ಮಾದರಿಯಾಗಿದೆ ಎಂದು ತಿಳಿಸಿದರು. ದಾಖಲೆಗಳ ಪೂರ್ಣ ಡಿಜಿಟಲೀಕರಣಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯ ಎಲ್ಲಾ ರೆಕಾರ್ಡ್ ರೂಂಗಳಲ್ಲಿರುವ ಎಲ್ಲಾ ದಾಖಲೆಗಳನ್ನು ಡಿಜಿಟಲಿ ಕರಣಗೊಳಿಸಿ ಗಣಕೀಕರಣಗೊಳಿಸಲಾಗಿದೆ. ಇದರಿಂದಾಗಿ ಕಡತಗಳು ಕಳದು ಹೋಗುವ ಸಂಭವ ಕಡಿಮೆಯಿದ್ದು, ತಕ್ಷಣಕ್ಕೆ ದಾಖಲೆಗಳು ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದರು. ಕಂದಾಯ ಅದಾಲತ್ ಸಾಧನೆ
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಿಯತವಾಗಿ ನಡೆಸಲಾಗುವ ಕಂದಾಯ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಕನಿಷ್ಠ ೩ ತಿಂಗಳೊಳಗಾಗಿ ವಿಲೆವಾರಿ ಮಾಡಲಾಗುತ್ತಿದೆ. ಕಂದಾಯ ಇಲಾಖೆಯ ಎಲ್ಲ ಕಡತಗಳನ್ನು ಇ-ಆಫೀಸ್ ತಂತ್ರಾಂಶದ ಮುಖಾಂತರ ವಿಲೆಮಾಡುತ್ತಿದೆ ಎಂದು ವಿವರಿಸಿದರು. ಈ ವೇಳೆ ಎಸ್‌ಪಿ ಬಿ.ನಿಖಿಲ್, ಎಡಿಸಿ ಮಂಗಳ ಇದ್ದರು.