ಸಾರಾಂಶ
ಪ್ರತಿಭಟನೆ ತಾತ್ಕಾಲಿಕ ಸ್ಥಗಿತ । ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಹೇಳಿಕೆ
ಕನ್ನಡಪ್ರಭವಾರ್ತೆ ಸೋಮವಾರಪೇಟೆಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳು ಹಂತಹಂತವಾಗಿ ಬಗೆಹರಿಸಲು ಕ್ರಮ ವಹಿಸಲಾಗಿದ್ದು, ಆಸ್ಪತ್ರೆಯ ಅಭಿವೃದ್ಧಿಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಡಿಎಚ್‌ಒ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಹೇಳಿದರು.ಸೋಮವಾರ ಆಸ್ಪತ್ರೆಗೆ ತೆರಳಿದ ಸಮಿತಿಯ ಪದಾಧಿಕಾರಿಗಳು ಆಡಳಿತ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಅವರೊಂದಿಗೆ ಮಾತುಕತೆ ನಡೆಸಿದರು. ವೈದ್ಯರ ಕೊರತೆಯಿದೆ. ಈಗ ನಾಲ್ಕು ವೈದ್ಯರು ಕೆಲಸ ಮಾಡುತ್ತಿದ್ದೇವೆ. ಸೋಮವಾರ ದಿನ 300 ರಷ್ಟು ರೋಗಿಗಳನ್ನು ಒಬ್ಬ ವೈದ್ಯ ಪರೀಕ್ಷೆ ಮಾಡಬೇಕು.ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ. ರಕ್ತ ಪರೀಕ್ಷಾ ಘಟಕದಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಎಕ್ಸರೆ ಪ್ರಿಂಟ್ ನೀಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕವಾಗಬೇಕಿದೆ. ಆಸ್ಪತ್ರೆಯಲ್ಲಿ ವೈದ್ಯರಿಗೆ ಒತ್ತಡವಿದೆ. ದಾದಿಯರ ಖಾಲಿ ಹುದ್ದೆಗಳ ನೇಮಕವಾಗಬೇಕಿದೆ. ಶಾಸಕರಾದ ಡಾ.ಮಂತರ್‌ಗೌಡ ಅವರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಅರುಣ್ ಹೇಳಿದರು. ಇದೇ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಿಹಿ ವಿತರಿಸಿ, ಉತ್ತಮ ಸೇವೆ ಸಲ್ಲಿಸುವಂತೆ ಮನವಿ ಮಾಡಿಕೊಂಡರು.ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಪದಾಧಿಕಾರಿಗಳ ಜಿ.ಎಂ.ಹೂವಯ್ಯ, ಜಯರಾಮ್, ಆದರ್ಶ್ ತಮ್ಮಯ್ಯ, ತ್ರಿಶೂಲ್ ಕಾರ್ಯಪ್ಪ, ಮಂಜುನಾಥ್ ಮತ್ತಿತರರು ಇದ್ದರು.