ಕೌಟುಂಬಿಕ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಅಗತ್ಯ: ಡಾ.ಮೀನಾಕ್ಷಿ ಬಾಳಿ

| Published : Mar 30 2024, 12:54 AM IST

ಕೌಟುಂಬಿಕ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಅಗತ್ಯ: ಡಾ.ಮೀನಾಕ್ಷಿ ಬಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಶೋಷಣೆಗೆ ಸರ್ಕಾರಗಳು ಕುಮ್ಮಕ್ಕು ನೀಡುವ ಧೋರಣೆ ಅನುಸರಿಸಬಾರದು. ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಲಾಗುತ್ತಿದೆ.

ಹಗರಿಬೊಮ್ಮನಹಳ್ಳಿ: ಎಲ್ಲ ರಂಗಗಳಲ್ಲೂ ಮಹಿಳೆಯರು ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ವ್ಯಾಪಕ ಯೋಜನೆಗಳ ಅಗತ್ಯವಿದೆ ಎಂದು ಅಖಿಲಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ತಿಳಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜೆಎಂಎಸ್ ತಾಲೂಕು ಘಟಕದಿಂದ ನಡೆದ ವಿಶ್ವಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಶೋಷಣೆಗೆ ಸರ್ಕಾರಗಳು ಕುಮ್ಮಕ್ಕು ನೀಡುವ ಧೋರಣೆ ಅನುಸರಿಸಬಾರದು. ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಆದರೆ, ಈ ವರೆಗಿನ ಸರ್ಕಾರಗಳು ಕೇವಲ ನೆಪ ಮಾತ್ರಕ್ಕೆ ಕಾನೂನುಗಳನ್ನು ಅನುಷ್ಠಾನಗೊಳಿಸುತ್ತಿರುವುದು ಶೋಷಣೆಗೆ ಕುಮ್ಮಕ್ಕು ನೀಡುವಂತಿದೆ. ಮಹಿಳಾ ಮೀಸಲಾತಿ ಕಡತಗಳಿಗೆ ಸೀಮಿತವಾಗುವುದು ಬೇಡ, ಕ್ರೀಯಾತ್ಮಕವಾಗಿ ಜಾರಿಗೊಳ್ಳಬೇಕು. ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳನ್ನು ಹೆಚ್ಚುತ್ತಿದ್ದು ತಡೆಗೆ ಸೂಕ್ತಕ್ರಮ ಅನುಸರಿಸಬೇಕು ಎಂದರು.

ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಸರ್ದಾರ್ ಹುಲಿಗೆಮ್ಮ ಮಾತನಾಡಿ, ಸರ್ಕಾರದ ಬಯಲುಮುಕ್ತ ಶೌಚಾಲಯ ಯೋಜನೆ ಕೇವಲ ಕಡತದಲ್ಲಿ ಮಾತ್ರ ಇದೆ. ಬಹುತೇಕ ಗಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿಲ್ಲ. ಶೌಚಾಲಯಗಳಿಲ್ಲದೆ ಬಯಲು ಶೌಚಾಲಯ ವ್ಯವಸ್ಥೆ ಮುಕ್ತಗೊಳ್ಳದಿರುವುದು ಸರ್ಕಾರಗಳ ನೀತಿಗೆ ಸಾಕ್ಷಿಯಾಗಿವೆ. ಅಪಾರ ಸಂಖ್ಯೆಯ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿದ್ದರೂ ಕೇವಲ ಪುರುಷರಷ್ಟೇ ದಾಖಲಾಗಿದ್ದಾರೆ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ತಾರತಮ್ಯ ಬೇಡ ಎಂದು ತಿಳಿಸಿದರು.

ಸಮಾಜ ಸೇವಕಿ ಡಾ.ಸಾಹಿರಾಬಾನು ಮಾತನಾಡಿ, ತಾಲೂಕಿನಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮೊತ್ತದಲ್ಲಿ ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ ಅಮ್ಮ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಹೊಲಿಗೆ ಯಂತ್ರ, ಲ್ಯಾಪ್‌ಟ್ಯಾಪ್ ಸೇರಿ ವಿವಿಧ ಉಪಕರಣಗಳನ್ನು ಉಚಿತವಾಗಿ ನೀಡಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಿನ ಹಸ್ತ ಚಾಚಲು ಮಹಿಳೆಯರೇ ಮುಂದಾಗಬೇಕಿದೆ. ಪರಿಸರವನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಮನೆ, ಹಿತ್ತಲ, ಹೊಲಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ಕಾಪಾಡುವ ಅಗತ್ಯತೆ ಇದೆ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ ಮಾತನಾಡಿದರು. ಸಂಘಟನೆಯ ತಾಲೂಕು ಅಧ್ಯಕ್ಷೆ ಲಕ್ಷ್ಮೀದೇವಿ ಅಧ್ಯಕ್ಷತೆವಹಿಸಿದ್ದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಜ್ಯೋತೀಶ್ವರಿ, ಉಪನ್ಯಾಸಕಿ ಡಾ.ಪಿ.ಉಮಾ ಇದ್ದರು. ಹುಲುಗಪ್ಪ, ಹನುಮಯ್ಯ, ಮಹಾಂತೇಶ ಕ್ರಾಂತಿಗೀತೆ ಹಾಡಿದರು. ಶಿಕ್ಷಕಿ ಸಂಗೀತಾ, ಮಾಬುನ್ನಿ ನಿರ್ವಹಿಸಿದರು.