ಸಾರಾಂಶ
ಹಾವೇರಿ: ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ಹಿರಿಯ ಮತ್ತು ಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಜಿಲ್ಲಾ ಕಾಂಗ್ರೆಸ್ ಕಚೇರಿಯ ನೂತನ ಕಟ್ಟಡವನ್ನು ಶೀಘ್ರ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಸಹಕಾರದಡಿ ತಾತ್ಕಾಲಿಕ ಕಟ್ಟಡದಲ್ಲಿ ಪಕ್ಷದ ಚಟುವಟಿಕೆ ಜರುಗುತ್ತಿವೆ. ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮೊದಲು ಒಂದು ಮಹಡಿಯ ಕಟ್ಟಡವನ್ನು ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಸಾಗಬೇಕು ಎಂದರು. ಒಂದು ಸಣ್ಣ ಅಪಘಾತ ಸಂಭವಿಸಿದರೂ ಜಿಲ್ಲೆಯಿಂದ ದಾವಣಗೆರೆ ಅಥವಾ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆ ಇದೆ. ಅದಕ್ಕಾಗಿ ಎಂಆರ್‌ಐ ಸ್ಕ್ಯಾನ್ ಸೆಂಟರ್ ಸೌಲಭ್ಯ ಒದಗಿಸಬೇಕೆಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಲ್ಲಿ ಮನವಿ ಮಾಡಿದರು.ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಹಾಗೂ ಐಟಿಐ ಕೋರ್ಸ್‌ಗಳಿಗೆ ಹೋಲಿಸಿದರೆ ಜಿಟಿಟಿಸಿ ಅಧ್ಯಯನ ಮಾಡಿದವರಿಗೆ ಉದ್ಯೋಗ ಸಿಗುವುದು ನಿಶ್ಚಿತ. ಎಸ್ಸೆಸ್ಸೆಲ್ಸಿ ಪಾಸಾಗಿರುವ ಅಭ್ಯರ್ಥಿಗಳು ಮೂರು ವರ್ಷದ ಕೋರ್ಸ್ ಹಾಗೂ ಒಂದು ಇಂಟರ್ನ್ಶಿಫ್ ಮುಗಿಸಿದರೆ ಉದ್ಯೋಗ ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರವೂ ಕೂಡ ಯುವಕರಿಗೆ ಉದ್ಯೋಗ ಕೊಡಿಸಲು ಆದ್ಯತೆ ನೀಡಿದೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ನಮ್ಮ ಜಿಲ್ಲಾಸ್ಪತ್ರೆಗೆ 450 ಬೆಡ್‌ಗಳ ಅವಶ್ಯವಿದೆ. ಜತೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕಿದೆ. ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಜಾಗ ಕೊಡಿಸಿ ಲೋಕಾರ್ಪಣೆ ಮಾಡುವಂತೆ ವೈದ್ಯಕೀಯ ಸಚಿವರಿಗೆ ಮನವಿ ಮಾಡಿದರು. ಈ ವೇಳೆ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ರಾಜು ಕುನ್ನೂರ, ಎಂ.ಎಂ. ಮೈದೂರ, ಪ್ರಭುಗೌಡ ಬಿಷ್ಟನಗೌಡ್ರ, ಎಂ.ಎ. ಗಾಜಿಗೌಡ್ರ ಇತರರು ಇದ್ದರು.