ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ: ಸಚಿವ ರಹೀಮ್ ಖಾನ್

| Published : Jan 22 2025, 12:31 AM IST

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ: ಸಚಿವ ರಹೀಮ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

Appropriate status for workers who have worked for the party: Minister Rahim Khan

-ಯಾದಗಿರಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವ್ಯ ಇತಿಹಾಸವಿದೆ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರಿಗೆ ಪಕ್ಷ ಸಕಾಲದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ರಾಜ್ಯ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಂದು ಕುಟುಂಬಕ್ಕೆ ಅದರ ಲಾಭ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಆಡಳಿತದಿಂದ ಮಾತ್ರ ರಾಜ್ಯದಲ್ಲಿ ಶಾಂತಿ, ಸಾಮರಸ್ಯ, ಅಭಿವೃದ್ಧಿ ಸಾಧ್ಯ. ಜೊತೆಗೆ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದೆ. ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಆಡಳಿತ, ಶಾಂತಿ ಕದಡುವ ಪ್ರಯತ್ನಕ್ಕೆ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರ ಕಾರ್ಯ ವೈಖರಿಯನ್ನು ಟೀಕಿಸಿದರು.

ಗಿರಿಜಿಲ್ಲೆಯೊಂದಿಗೆ ಕುಟುಂಬದ ಸಂಬಂಧ ಅವಿನಾಭಾವ ಸಂಬಂಧವಿದೆ, ನಮ್ಮ ತಂದೆಯವರು ಗುರುಮಠಕಲ್ ಮತಕ್ಷೇತ್ರದ ಕಡೇಚೂರ ಗ್ರಾಮದವರು. ಬೇರೆ ಬೇರೆ ಕಾರಣಗಳಿಂದ ಕುಟುಂಬ ಬೀದರದಲ್ಲಿ ಶಾಶ್ವತವಾಗಿ ನೆಲೆಸಿದೆ. ನಾನು ಬಡತನದಲ್ಲಿ ಹುಟ್ಟಿ, ಬೆಳೆದು ಎಲ್ಲಾ ವರ್ಗದ ಜನರ ಜೊತೆ ಪ್ರೀತಿ, ವಿಶ್ವಾಸದಿಂದ ಬದುಕು ನಿರ್ವಹಿಸಿಕೊಂಡು ಬಂದಿದ್ದೇನೆ. ಪರಿಣಾಮ ಕಾಂಗ್ರೆಸ್ ಪಕ್ಷವು ನನ್ನ ಪ್ರಾಮಾಣಿಕತೆ, ಸಂಘಟನೆ ಗಮನಿಸಿ, ಈ ಹಿಂದೆ ಬೀದರ್ ಉತ್ತರ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಟಿಕೇಟ್ ನೀಡಿ, ಎಲ್ಲಾ ಕಾರ್ಯಕರ್ತರ, ಎಲ್ಲಾ ಸಮಾಜದ ಜನರು ಮತ ನೀಡಿ, ಗೆಲ್ಲಿಸಿದ ಪರಿಣಾಮ ನಾನು ಸಚಿವನಾಗಿ ರಾಜ್ಯದ ಜನರ ಕೆಲಸ ಮಾಡುತ್ತಿದ್ದೇನೆ ಎಂದು ರಾಜಕೀಯ ಪ್ರವೇಶ ಕುರಿತು ವಿವರಿಸಿದರು.

ಜಿಲ್ಲಾ ಉಸ್ತವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಚಿದಾನಂದಪ್ಪ ಕಾಳೆಬೆಳಗುಂದಿ, ಡಾ. ಭೀಮಣ್ಣ ಮೇಟಿ, ಸುದರ್ಶನ ನಾಯಕ, ಶ್ಯಾಮಸನ್ ಮಾಳಿಕೇರಿ, ಶರಣಪ್ಪಗೌಡ ಕೌಳೂರ, ಬಸ್ಸುಗೌಡ ಬಿಳ್ಹಾರ, ಮಂಜುಳಾ ಗೂಳಿ, ಇರ್ಫಾನ್ ಬಾದಲ್, ಮಲ್ಲಣ್ಣ ದಾಸನಕೇರಿ, ವಿವಿಧ ಬ್ಲಾಕ್‌ಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.

------

ಫೋಟೊ: ಯಾದಗಿರಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ರಾಜ್ಯ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಮಾತನಾಡಿದರು.

21ವೈಡಿಆರ್6