ಸಾರಾಂಶ
ಲಕ್ಷ್ಮೇಶ್ವರ: ಹೊಸ ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಗದಗ-ಬಂಕಾಪುರ (ಕೈಗಾ-ಇಳಕಲ್) ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವುದಾಗಿ ಕೇಂದ್ರ ಭೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಇಲ್ಲಿಯ ರಂಭಾಪುರಿ ಜಗದ್ಗುರು ಶ್ರೀ ವೀರಗಂಗಾಧರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ ಯಾರ್ಡ್) ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣಪತಿ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು. ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜನರಲ್ಲಿ ಧಾರ್ಮಿಕ ಭಾವನೆ, ಭಯ-ಭಕ್ತಿ ಮೂಡಿಸಿ ಸನ್ಮಾರ್ಗದತ್ತ ಕೊಂಡೊಯ್ಯುವ ಶ್ರದ್ಧಾ-ಶಕ್ತಿ ಕೇಂದ್ರಗಳಾಗಿವೆ ಎಂದು ಹೇಳಿದರು.ಲಕ್ಷ್ಮೇಶ್ವರ ಪಟ್ಟಣ ಗದಗ ಜಿಲ್ಲೆಯಲ್ಲಿಯೇ ತೀವೃಗತಿಯಲ್ಲಿ ಬೆಳೆಯುತ್ತಿದೆ. ಇಲ್ಲಿನ ಎಪಿಎಂಸಿ ರಾಜ್ಯದಲ್ಲಿಯೇ ಹೆಸರಾಗಿದ್ದು, ಅದಕ್ಕೆ ಇಲ್ಲಿನ ವ್ಯಾಪಾರಸ್ಥರಲ್ಲಿನ ಮನೋಧರ್ಮವೇ ಕಾರಣವಾಗಿದೆ. ಈ ಭಾಗದ ಜನರೆಲ್ಲರ ಬೇಡಿಕೆಯಂತೆ ಗದಗ ಬಂಕಾಪುರ ರಸ್ತೆ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಲಾಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮತಿ ನೀಡುವ ವೇಳೆ ಪರಿಗಣಿಸುವುದಾಗಿ ಹೇಳಿದ್ದಾರೆ. ಇನ್ನು ಗದಗ ಯಲವಿಗಿ ರೈಲು ಸಂಪರ್ಕದ ಕುರಿತು ರೈಲ್ವೆ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಬಜೆಟ್‌ನಲ್ಲಿ ₹೨೦೦ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಡಿಪಿಆರ್‌ಗೆ ಒಪ್ಪಿಗೆ ಪಡೆದುಕೊಂಡು ಬಂದು ಭೂಸ್ವಾಧೀನ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ವೇಳೆ ಹೋಮ-ಹವನ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾನ್ನಿಧ್ಯ ವಹಿಸಿದ್ದ ನೊಣವಿನಕೆರೆ ಕಾಣಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, ಸಂಗಣ್ಣ ಹನುಮಸಾಗರ, ಸಿದ್ದನಗೌಡ ಬಳ್ಳೊಳ್ಳಿ, ಸುಭಾಷ ಓದುನವರ, ತೋಂಟೇಶ ಮಾನ್ವಿ, ಕುಬೇರಪ್ಪ ಮಹಾಂತಶೆಟ್ಟರ, ಆನಂದ ಮೆಕ್ಕಿ, ಎಸ್.ಕೆ. ಕಾಳಪ್ಪನವರ, ಸಂತೋಷ ಬಾಳಿಕಾಯಿ, ಎನ್.ಎಸ್. ಪಾಟೀಲ, ರಾಜು ಕೊಟಗಿ, ವಿಜಯ ಬೂದಿಹಾಳ, ಸೋಮೇಶ ಉಪನಾಳ, ರಾಘವೇಂದ್ರ ಸದಾವರ್ತಿ,ಈರಣ್ಣ ಅಕ್ಕೂರ, ಎಂ.ಆರ್. ಪಾಟೀಲ, ಬಸವರಾಜ ಮಹಾಂತಶೆಟ್ಟರ, ನೀಲಪ್ಪ ಸಂಶಿ ಇದ್ದರು.